ಡಿ ಎಲ್ ಇದ್ದರಷ್ಟೇ ಕ್ಯಾಂಪಸ್ ಒಳಗೆ ಕಾರು-ಬೈಕ್!

Posted By:

ಶಾಲಾ ಕಾಲೇಜುಗಳಲ್ಲಿ ಯುವಕರು ಬೈಕು ಕಾರು ತಂದು ಪುಂಡಾಟಿಕೆ ಮಾಡುವುದನ್ನು ನಿಲ್ಲಿಸಲು ಬೆಂಗಳೂರು ಸಂಚಾರ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ.

ಚಾಲನಾ ಪರವಾನಗಿ(ಡಿಎಲ್) ಇಲ್ಲದ ವಾಹನ ಸವಾರರಿಗೆ ಶಾಲೆ-ಕಾಲೇಜು ಅವರಣದಲ್ಲಿ ಪಾರ್ಕಿಂಗ್​​ಗೆ ಅವಕಾಶ ನೀಡದಂತೆ ಬೆಂಗಳೂರು ಸಂಚಾರ ಪೊಲೀಸರು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಟ್ರಾಫಿಕ್ ಪೊಲೀಸರು ನಗರದಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.

ಡಿ ಎಲ್ ಇಲ್ಲ ಅಂದ್ರೆ ಪಾರ್ಕಿಂಗ್ ಇಲ್ಲ

ಪೊಲೀಸರ ಸೂಚನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕೂಡ ಈ ಕುರಿತು ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ಶಾಲೆ-ಕಾಲೇಜು ಆವರಣದಲ್ಲಿ ಬೈಕ್, ಕಾರು ತಂದು ಜಾಲಿ ರೈಡ್ ಮಾಡುವ ವಿದ್ಯಾರ್ಥಿಗಳ ಪುಂಡಾಟ ಇನ್ನು ಮುಂದೆ ನಡೆಯುವುದಿಲ್ಲ.

ಡಿಎಲ್ ಹೊಂದಿರುವ ವಿದ್ಯಾರ್ಥಿಗಳ ವಾಹನಗಳಿಗೆ ಮಾತ್ರ ಶಾಲೆ-ಕಾಲೇಜು ಆವರಣದಲ್ಲಿ ಪಾರ್ಕಿಂಗ್​ಗೆ ಅವಕಾಶ ಕಲ್ಪಿಸಬೇಕು. ಡಿಎಲ್ ಇಲ್ಲದ ವಾಹನಗಳಿಗೆ ಅವಕಾಶ ನೀಡಬೇಡಿ. ಒಂದು ವೇಳೆ ಅಂಥವು ಕಂಡುಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟರೆ ವಾಹನ ಜಪ್ತಿ ಮಾಡುವುದಾಗಿ ಭರವಸೆ ಕೊಡುತ್ತಿದ್ದಾರೆ.

ಶಾಲೆ- ಕಾಲೇಜುಗಳಿಗೆ ತೆರಳುವ ನೆಪದಲ್ಲಿ ವಿದ್ಯಾರ್ಥಿಗಳು ಪಾಲಕರಿಗೆ ತಿಳಿಸಿ ಅಥವಾ ತಿಳಿಸದೆ ಬೈಕ್ ಮತ್ತು ಕಾರುಗಳನ್ನು ತರುತ್ತಿದ್ದಾರೆ. ನಂತರ ಜಾಲಿ ರೈಡ್, ವ್ಹೀಲಿಂಗ್ ಹಾಗೂ ಸ್ನೇಹಿತರ ಜತೆ ಮೋಜುಮಸ್ತಿಗೆ ತೆರಳುವ ಮೂಲಕ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದನ್ನು ತಪ್ಪಿಸಲು ಶಾಲೆ-ಕಾಲೇಜಿಗೆ ಬೈಕ್, ಕಾರುಗಳನ್ನು ತರುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಬದಲಿಗೆ ಶಾಲೆ-ಕಾಲೇಜು ಆವರಣದಲ್ಲಿ ಚಾಲನಾ ಪರವಾನಗಿ (ಡಿಎಲ್) ಹೊಂದಿರುವ ವಿದ್ಯಾರ್ಥಿಗಳಿಗಷ್ಟೇ ಬೈಕ್ ಮತ್ತು ಕಾರುಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸುವಂತೆ ಶಿಕ್ಷಣ ಇಲಾಖೆ ಈ ಹಿಂದೆಯೇ ಆದೇಶಿಸಿದೆ. ಆದರೆ, ಸಾಕಷ್ಟು ಶಿಕ್ಷಣ ಸಂಸ್ಥೆಗಳಿಗೆ ಈ ಸಂಗತಿ ಗೊತ್ತಿಲ್ಲವಾದ್ದರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಟ್ರಾಫಿಕ್ ಪೊಲೀಸರು ತೀರ್ಮಾನಿಸಿದ್ದಾರೆ.

ತಮ್ಮ ಠಾಣಾ ವ್ಯಾಪ್ತಿಯಲ್ಲಿ ಇರುವ ಶಾಲೆ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರನ್ನು ಭೇಟಿ ಮಾಡಿ ಶಿಕ್ಷಣ ಇಲಾಖೆ ಸುತ್ತೋಲೆ ಬಗ್ಗೆ ತಿಳಿಸುತ್ತಿದ್ದಾರೆ.

English summary
Bangalore traffic police has instructed the education department not to allow parking riders without driving license (DL) for parking at school-college grounds.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia