ಲೆಕ್ಕ ಮಾಡಲು ಬಾರದ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ!

Posted By:

ಭಾರತದಲ್ಲಿ ಕಲಿಕೆ ಪ್ರಮಾಣ ಕುಸಿಯುತ್ತಿರುವುದಾಗಿ ವಿಶ್ವಬ್ಯಾಂಕ್‌ ಎಚ್ಚರಿಕೆ ನೀಡಿದೆ. ಅಲ್ಲದೇ ಶಿಕ್ಷಣದ ಕುಸಿತದಲ್ಲಿ ಭಾರತ ಮುಂದಿದೆ ಎಂಬ ಆತಂಕಕಾರಿ ವಿಚಾರವನ್ನು ವಿಶ್ವಬ್ಯಾಂಕ್ ತೆರೆದಿಟ್ಟಿದೆ.

ವಿಶ್ವಬ್ಯಾಂಕ್ ನ ವಿಶ್ವ ಪ್ರಗತಿ ವರದಿ 2018ರ ಪ್ರಕಾರ ಮಧ್ಯಮ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಲ್ಲಿ ಕಲಿಕೆಯ ಪ್ರಮಾಣ ಕುಸಿಯುತ್ತಿರುವುದು ತಿಳಿದುಬಂದಿದೆ.

ಎರಡನೇ ತರಗತಿಯ ಮಕ್ಕಳಿಗೆ ಒಂದಕ್ಷರವೂ ಓದಲು ಬಾರದೆ ಇರುವ 12 ದೇಶಗಳ ಪಟ್ಟಿಯಲ್ಲಿ ಭಾರತ 2 ನೇ ಸ್ಥಾನದಲ್ಲಿದೆ. 2ನೇ ಕ್ಲಾಸಿನ ಮಕ್ಕಳು 2 ಅಂಕಿಯ ಲೆಕ್ಕ ಮಾಡಲು ಬಾರದ 7 ದೇಶಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.

ಮಧ್ಯಮ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಲ್ಲಿ ಕಲಿಕೆಯ ಪ್ರಮಾಣ ಕುಸಿಯುತ್ತಿದ್ದಿದ್ದು, ನೈಜ ಕಲಿಕೆಯಿಲ್ಲದ ಶಿಕ್ಷಣ ಕೇವಲ ನಿರರ್ಥಕ ಮಾತ್ರವಲ್ಲ ಮಕ್ಕಳಿಗಾಗುವ ದೊಡ್ಡ ಅನ್ಯಾಯ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಭಾರತದ ಕಲಿಕೆ ಪ್ರಮಾಣದಲ್ಲಿ ಕುಸಿತ

ಹಲವಾರು ವರ್ಷ ಶಾಲಾ ಶಿಕ್ಷಣವನ್ನು ಪಡೆದ ಬಳಿಕವೂ ಲಕ್ಷಾಂತರ ಮಕ್ಕಳಿಗೆ ಓದಲು, ಬರೆಯಲು ಸರಳ ಗಣಿತದ ಲೆಕ್ಕ ಬರೆಯಲು ಬಾರದು. ಈ ಕಲಿಕೆಯ ಕೊರತೆ ಸಮಾಜದಲ್ಲಿ ತಾರತಮ್ಯ ಉಂಟುಮಾಡುತ್ತಿದೆ. ಕನಿಷ್ಠ ಕೌಶಲ್ಯಗಳೂ ಇಲ್ಲದೇ ಅವರು ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು ಅವರಿಗೆ ಜೀವನದಲ್ಲಿ ಯಶಸ್ಸು ಗಳಿಸಲು ಬೇಕಾಗುವ ಕೌಶಲ್ಯಗಳನ್ನು ಕಲಿಸಲು ವಿಫಲವಾಗುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಕಡಿಮೆ ವೇತನ ಪಡೆದು ಜೀವನ ನಿರ್ವಹಿಸುವಂತಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

''ಗ್ರಾಮೀಣ ಭಾರತದಲ್ಲಿ 3 ನೇ ಕ್ಲಾಸಿನ ಮುಕ್ಕಾಲು ಭಾಗ ಮಕ್ಕಳಿಗೆ ಎರಡಂಕಿಯ ಲೆಕ್ಕ (ವ್ಯವಕಲನ) ಬರುವುದಿಲ್ಲ. 5 ನೇ ಕ್ಲಾಸಿನ ಅರ್ಧದಷ್ಟು ಮಕ್ಕಳು ಈ ಲೆಕ್ಕ ಬಿಡಿಸಲು ಎಡವುತ್ತಾರೆ,'' ಎಂದಿರುವ ವಿಶ್ವಬ್ಯಾಂಕ್‌, ನೈಜ ಕಲಿಕೆಯಿಲ್ಲದ ಶಿಕ್ಷಣ ಅಪ್ರಯೋಜಕ, ಇದರಿಂದ ಬಡತನ ನಿರ್ಮೂಲನೆ, ಸಮಾನ ಅವಕಾಶಗಳ ನಿರ್ಮಾಣ ಅಸಾಧ್ಯ ಎಂದು ಅಭಿಪ್ರಾಯ ಪಟ್ಟಿದೆ.

''ಕಲಿಕೆಯ ಕೊರತೆ ನೈತಿಕ ಮೌಲ್ಯಗಳು ಹಾಗೂ ಆರ್ಥಿಕ ಬಿಕ್ಕಟ್ಟಿಗೆ ರಹದಾರಿ,'' ಎಂದು ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಹೇಳಿದ್ದಾರೆ. ನೈಜ ಶಿಕ್ಷಣ ಯುವಕರಿಗೆ ಉತ್ತಮ ಉದ್ಯೋಗ, ಆದಾಯ, ಆರೋಗ್ಯ, ಬಡತನ ರಹಿತ ಜೀವನವನ್ನು ಕಲ್ಪಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

English summary
In its latest report the world bank has warned of a learning crisis in global education particularly in low and middle-income countries like India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia