ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಹವಾಮಾನ ಬಿಕ್ಕಟ್ಟನ್ನು ವಾಸ್ತವವಾಗಿ ಅರಿಯಲು ವಾರ್ಷಿಕವಾಗಿ ಏಪ್ರಿಲ್ 22 ರಂದು ಭೂಮಿ ದಿನವನ್ನು ಆಚರಿಸಲಾಗುತ್ತದೆ. ವರ್ಷಗಳು ಉರುಳಿದಂತೆ ಹವಾಮಾನವು ಹದಗೆಡುತ್ತಿದೆ ಮತ್ತು ನಮ್ಮ ಪ್ರಕೃತಿಯನ್ನು ಉಳಿಸಲು ಮತ್ತು ಸಂರಕ್ಷಿಸಲು ಕೈಜೋಡಿಸುವುದು ನಮ್ಮ ಕರ್ತವ್ಯವಾಗಿದೆ.

ಅರ್ಥ್ ಡೇ ಸಂಸ್ಥೆಯ ಪ್ರಕಾರ 2022ರ ಭೂಮಿ ದಿನದ ಥೀಮ್ "ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ." ಈ ವರ್ಷದ ಥೀಮ್ ದಿಟ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವುದು, ವಿಶಾಲವಾದ ರೀತಿಯಲ್ಲಿ ಹೊಸತನವನ್ನು ರೂಪಿಸುವುದು ಮತ್ತು ಸಮಾನ ರೀತಿಯಲ್ಲಿ ಕಾರ್ಯಗತಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಮಾಲಿನ್ಯ, ಜಾಗತಿಕ ತಾಪಮಾನ, ನೀರಿನ ಕೊರತೆ ಮತ್ತು ಇತರ ಬಿಕ್ಕಟ್ಟಿನಿಂದ ಭೂಮಿಯನ್ನು ಉಳಿಸುವಲ್ಲಿ ಜನರು ಹೇಗೆ ಕೈಜೋಡಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಬನ್ನಿ ಈ ದಿನದ ಕುರಿತು ಪ್ರಬಂಧ ಬರೆಯಲು ಮತ್ತು ಭಾಷಣ ಮಾಡಲು ನಿಮಗೆ ಮಾರ್ಗದರ್ಶನ ನೀಡುತ್ತೇವೆ ಓದಿ ತಿಳಿಯಿರಿ.
ಭೂಮಿ ತಾಯಿಯ ಬಗ್ಗೆ ಮತ್ತು ಭೂಮಿಯು ಎದುರಿಸುತ್ತಿರುವ ಪರಿಸ್ಥಿತಿಗಳಾದ ಮಾಲಿನ್ಯ, ಜಾಗತಿಕ ತಾಪಮಾನ, ಕಾಡುಗಳ ಕಣ್ಮರೆಯಾಗುವಿಕೆ ಮತ್ತು ಓಝೋನ್ ಪದರದ ಸವಕಳಿ ಇತ್ಯಾದಿಗಳ ಬಗ್ಗೆ ಬರೆಯುವ ಮೂಲಕ ನಿಮ್ಮ ಪ್ರಬಂಧ ಅಥವಾ ಭಾಷಣವನ್ನು ನೀವು ಪ್ರಾರಂಭಿಸಬಹುದು. ಪ್ರಬಂಧ ಬರೆಯುವಾಗ ಅಥವಾ ಭಾಷಣ ಮಾಡುವಾಗ ನೀವು ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಜೊತೆಗೆ ಪ್ರಸಕ್ತ ವರ್ಷದಲ್ಲಿ ಭೂಮಿ ರಕ್ಷಣೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ನೀವು ಉಲ್ಲೇಖಿಸಬಹುದು.
ಈ ದಿನ ಹೆಚ್ಚು ಮರಗಳನ್ನು ನೆಡುವುದು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸುವುದು, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಮರುಬಳಕೆ ಮಾಡುವುದು ಇತ್ಯಾದಿಗಳಂತಹ ಸಂಪನ್ಮೂಲಗಳನ್ನು ಹೇಗೆ ಸಂರಕ್ಷಿಸುವುದು ಎಂಬುದರ ಕುರಿತು ಸಲಹೆಗಳನ್ನು ನೀಡುವ ಮೂಲಕ ತಾಯಿ ಭೂಮಿಯನ್ನು ಸಂರಕ್ಷಿಸಲು ತೆಗೆದುಕೊಳ್ಳಬಹುದಾದ ಉಪಕ್ರಮಗಳ ಬಗ್ಗೆ ತಿಳಿಸಬಹುದು. ವಿದ್ಯಾರ್ಥಿಗಳು ಮತ್ತು ಮಕ್ಕಳು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಕೆಳಗೆ ನೀಡಿರುವ ಮಾದರಿಯನ್ನು ಓದಿಕೊಳ್ಳಿ.

ಮಾದರಿ 1:
ಪ್ರಪಂಚದಾದ್ಯಂತ ಭೂಮಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಪರಿಸರ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಸ್ಥಾಪಿಸಲಾಗಿದೆ. ಅರ್ಥ್ ಡೇ ಎಂದು ಕರೆಯಲಾಗುವ ಈ ದಿನವನ್ನು 1970 ರಲ್ಲಿ ಅಮೆರಿಕದ ವ್ಯಕ್ತಿ ಸೆನೆಟರ್ ಗೇಲಾರ್ಡ್ ನೆಲ್ಸನ್ ಸ್ಥಾಪಿಸಿದರು. ನೆಲ್ಸನ್ ಕೈಗಾರಿಕಾ ಅಭಿವೃದ್ಧಿಯಿಂದ ಪರಿಸರಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ಮೊದಲು ಜನರಿಗೆ ತಿಳಿಸಿದರು.
ಈ ವಿಷಯವಾಗಿ ನೆಲ್ಸನ್ ಅಮೆರಿಕನ್ ಸಮಾಜವನ್ನು ಸಜ್ಜುಗೊಳಿಸಿದರು, ಪ್ರತಿಭಟಿಸಿದರು ಮತ್ತು ಹಲವಾರು ಸಾಮೂಹಿಕ ಚಳುವಳಿಗಳನ್ನು ಮಾಡಿದರು. ಈ ಆಂದೋಲನದ ಫಲವಾಗಿ ಸರ್ಕಾರ ಈ ಚಳವಳಿಗಾರರ ಬೇಡಿಕೆಗಳನ್ನು ಆಲಿಸಬೇಕಾಯಿತು. ಸರ್ಕಾರವು ತೆಗೆದುಕೊಂಡ ಅನೇಕ ಪರಿಸರ ಸ್ನೇಹಿ ನಿರ್ಧಾರಗಳೊಂದಿಗೆ ಈ ಸಮಸ್ಯೆಯನ್ನು ಜಾಗತಿಕವಾಗಿ ಚರ್ಚಿಸಲು ವಿಶ್ವಸಂಸ್ಥೆಯ ಮೆಟ್ಟಿಲೇರಿತು. ವಿಶ್ವಸಂಸ್ಥೆಯಲ್ಲಿ 192ಕ್ಕೂ ಹೆಚ್ಚು ದೇಶಗಳು ಈ ಭೂಮಿ ರಕ್ಷಣೆಗೆ ಕೈಜೋಡಿಸಿವೆ.
ಪರಿಸರ ಸಂರಕ್ಷಣೆ ಬಹಳ ಮುಖ್ಯವಾದ ಸಂಗತಿ ಏಕೆಂದರೆ ಭೂಮಿಯ ಮೇಲಿರುವ ಎಲ್ಲಾ ನೈಸರ್ಗಿಕ ವಸ್ತುಗಳಾದ ಗಾಳಿ, ನೀರು, ಮರಗಳು, ಸಸ್ಯಗಳು ಮತ್ತು ಇವೆಲ್ಲವೂ ಒಟ್ಟಾಗಿ ನಮ್ಮ ಪರಿಸರವನ್ನು ರೂಪಿಸುತ್ತವೆ. ಇವೆಲ್ಲವೂ ಒಂದಕ್ಕೊಂದು ಸೇರಿ ಪರಿಸರವನ್ನು ಸಮತೋಲನಗೊಳಿಸುತ್ತವೆ ಹಾಗಾಗಿ ನಮ್ಮ ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಾವು ಜೀವಿಸುತ್ತಿರುವ ಪ್ರಕೃತಿಯು ನಮಗೆ ಗಾಳಿ, ನೀರು, ಮರಗಳು, ಸಸ್ಯಗಳು, ನದಿಗಳು, ಪರ್ವತಗಳು ಮತ್ತು ಭೂಮಿಯ ಕೆಳಗೆ ಇರುವ ಖನಿಜಗಳನ್ನು ನೀಡಿದೆ ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು.
ನಮ್ಮ ಕಠಿಣ ಪರಿಶ್ರಮದಿಂದ ನಾವು ಹಣವನ್ನು ಗಳಿಸಬಹುದು ಆದರೆ ನಾವು ನೈಸರ್ಗಿಕ ವಸ್ತುಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ನಿಸರ್ಗ ನೀಡಿದ ಈ ಎಲ್ಲಾ ವಸ್ತುಗಳು ಸೀಮಿತವಾಗಿವೆ ಹಾಗಾಗಿ ಭೂ ದಿನದಂದು ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಮನೆಗಳ ಸುತ್ತಮುತ್ತ ಹಾಗೂ ರಸ್ತೆ ಬದಿಯಲ್ಲಿ ಸ್ವಚ್ಛಗೊಳಿಸುವುದು ಮತ್ತು ಗಿಡಗಳನ್ನು ನೆಡುವಂತಹ ಉತ್ತಮ ಕೆಲಸವನ್ನು ಮಾಡುತ್ತಾರೆ.