ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ, ಸಿನಿಮಾ ತಯಾರಕರು ಹಾಗೂ ಪ್ರೇಕ್ಷಕರನ್ನು ಬೆರಗುಗೊಳಿಸುವಂತೆ ಮಾಡಿದ ಚಿತ್ರ ಬಾಹುಬಲಿ. ಚಿತ್ರ ನೋಡಿದವರೆಲ್ಲ ಅದರಲ್ಲಿನ ಪಾತ್ರಗಳಿಗಿಂತ ಚಿತ್ರ ನಿರ್ಮಾಣದಲ್ಲಿ ಬಳಸಿರುವ ಆಧುನಿಕ ತಂತ್ರಜ್ಞಾನದ ಬಗ್ಗೆಯೇ ಹೆಚ್ಚು ಮಾತನಾಡಿದರು.
ತನ್ನ ತಂತ್ರಜ್ಞಾನದಿಂದಲೇ ಇಡೀ ಸಿನಿಮಾ ಕ್ಷೇತ್ರವನ್ನು ನಿಬ್ಬೆರಗಾಗುವಂತೆ ಮಾಡಿರುವ ಹಿಂದಿರುವುದು ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಎನ್ನುವ ಮೂರಕ್ಷರದ ಆಧುನಿಕ ಮೋಡಿಯ ಕಲೆ.
ಕಂಪ್ಯೂಟರ್ ಗ್ರಾಫಿಕ್ಸ್ ಇಂದು ಎಲ್ಲಾ ಕ್ಷೇತ್ರಗಳಲ್ಲು ಆವರಿಸಿದೆ. ಚಿಕ್ಕ ಮಕ್ಕಳಿಂದ ಮುದುಕರವರೆಗೂ ಎಲ್ಲರನ್ನು ಆಕರ್ಷಿಸವಂತಹ ಶಕ್ತಿಯನ್ನು ಹೊಂದಿದೆ, ಹಾಗಾಗಿ ಗ್ರಾಫಿಕ್ಸ್ ಲೋಕದಲ್ಲಿ ಅವಕಾಶಗಳು ಹೆಚ್ಚು ಮತ್ತು ಅವಕಾಶಕ್ಕೆ ತಕ್ಕ ಹಾಗೆ ಅನುಕೂಲಗಳು ಕೂಡ ಇವೆ.
ಗ್ರಾಫಿಕ್ಸ್ ಕಲಿಯಲು ಬೇಕಾದ ಅರ್ಹತೆ:
ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬಯಸುವವರು ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಮಾಡಬಹುದು.
ಬೆಂಗಳೂರು , ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹಲವು ಗ್ರಾಫಿಕ್ ಡಿಸೈನ್ ಕಾಲೇಜುಗಳು ಇದ್ದು, ಇದರಲ್ಲಿ ಬಹುತೇಕ ಖಾಸಗಿ ಸಂಸ್ಥೆಗಳಾಗಿವೆ.
ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರಿನ ಜೆಎಸ್ಎಸ್ ಸೇರಿದಂತೆ ಜೀ, ಪಿಕಾಸೋ, ಅರೇನಾ, ಐಪಿಕ್ಸಿಯೋ, ಏಷ್ಯನ್ ಇನ್ಸ್ಟಿಟ್ಯೂಟ್ ರಾಜ್ಯದ ಪ್ರಮುಖ ಸಂಸ್ಥೆಗಳಾಗಿವೆ.
ವಿದ್ಯಾರ್ಹತೆ:
ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಡಿಪ್ಲೊಮಾ ಮಾಡಲು ಎಸ್ ಎಸ್ ಎಲ್ ಸಿ ಆಗಿದ್ದರೂ ಸಾಕು. ಆದರೆ ಪದವಿ ಮಾಡಬೇಕೆಂದರೆ ನೀವು ಪಿಯುಸಿ ತೇರ್ಗಡೆ ಹೊಂದಿರಬೇಕು. ಕೆಲವು ಖಾಸಗಿ ಸಂಸ್ಥೆಗಳು ಕೂಡ ಆ್ಯನಿಮೇಷನ್ ಶಿಕ್ಷಣ ನೀಡುತ್ತಿದ್ದು, ಅಲ್ಲಿಯೂ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದಾಗಿದೆ.
ಕನಸುಗಾರರಿಗೆ ಅವಕಾಶ ಹೆಚ್ಚು:
ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಕ್ಷೇತ್ರದಲ್ಲಿ ನೀವು ಪರಿಣಿತಿಗಳಿಸಬೇಕಾದರೆ ನಿಮಗೆ ಚಿತ್ರಕಲೆ ಮತ್ತು ದೃಶ್ಯ ಮಾಧ್ಯಮದ ಬಗ್ಗೆ ಒಂದಷ್ಟು ಅನುಭವ ಮತ್ತು ಮಾಹಿತಿ ಇರಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಉತ್ತಮ ಕನಸುಗಾರರಾಗಿರಬೇಕು. ಇತರರಿಗಿಂತ ಭಿನ್ನವಾಗಿ ಮತ್ತು ಕ್ರಿಯಾತ್ಮಕವಾಗಿ ಯೋಚಿಸುವಂತವರಾಗಿರಬೇಕು. ಬಣ್ಣಗಳ ಬಗ್ಗೆ ಹೆಚ್ಚು ಆಸಕ್ತಿ ಇದ್ದು, ದೊಡ್ಡ ದೊಡ್ಡ ವಿಚಾರಗಳನ್ನು ಸರಳ ಮತ್ತು ಸೂಕ್ಷವಾಗಿ ಹೇಳುವಂತಹ ಕಲೆ ನಿಮಗಿದ್ದರೆ ನೀವು ಅತ್ಯುತ್ತಮ ಆ್ಯನಿಮೇಟರ್ ಮತ್ತು ಗ್ರಾಫಿಕ್ ಡಿಸೈನರ್ ಆಗಬಹುದು.
ಉದ್ಯೋಗಾವಕಾಶ:
ಈ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಮಾಧ್ಯಮಗಳು, ಸಿನಿಮಾ, ಜಾಹೀರಾತು ಕ್ಷೇತ್ರ, ಕಾರ್ಪೊರೇಟ್ ಕಂಪನಿಗಳಲ್ಲಿ ಆ್ಯನಿಮೇಟರ್‌ಗಳಾಗಿ, 3ಡಿ ಗ್ರಾಫಿಕ್ಸ್ ಡಿಸೈನರ್‌ಗಳಾಗಿ ಬದುಕು ಕಂಡುಕೊಳ್ಳಬಹುದು.
ಇಂದಿನ ದಿನಗಳಲ್ಲಿ ಆನಿಮೇಶನ್ ಮತ್ತು ಕಂಪ್ಯೂಟರ್ ಗೇಮ್ಸ್ (ಆಟಗಳನ್ನು) ವೈಶಿಷ್ಟ್ಯ ಪೂರ್ಣವಾಗಿ ಅಭಿವೃದ್ಧಿಪಡಿಸುತ್ತಿರುವುದರಿಂದ ಮೊಬೈಲ್ ಗೇಮಿಂಟ್ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳಿವೆ.
ಭಾರತದ ಆ್ಯನಿಮೇಟರ್ ಗಳಿಗೆ ಜಾಗತೀಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆಯಿದ್ದು ಹಲವು ವಿದೇಶಿ ಸಿನಿಮಾ ತಯಾರಕರು ಮತ್ತು ಜಾಹೀರಾತು ಕಂಪನಿಗಳು ಗ್ರಾಫಿಕ್ ಡಿಸೈನರ್ ಗಳನ್ನು ದೊಡ್ಡ ಮಟ್ಟದ ಸಂಬಳ ನೀಡಿ ಆಹ್ವಾನಿಸುತ್ತಿವೆ.