ಇತ್ತೀಚೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು ಜುಲೈ ೩೦ ಮತ್ತು ೩೧ರಂದು ಕರ್ನಾಟಕ ಸಿಇಟಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ವಿದ್ಯಾರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕು ಎನ್ನುವುದಕ್ಕೆ ಸಲಹೆ ನೀಡಲಾಗಿದೆ.
ಸಿಇಟಿಯು ವೃತ್ತಿಪರ ಶಿಕ್ಷಣಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದ್ದು ಅತ್ಯಂತ ಮಹತ್ವದ್ದಾಗಿರುತ್ತದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳು ವಿಶೇಷ ತಯಾರಿ ನಡೆಸಬೇಕಾಗುತ್ತದೆ. ಪಿಯುಸಿ ಪರೀಕ್ಷೆಗಿಂತ ಹೆಚ್ಚಿನ ಶ್ರಮವನ್ನು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ವ್ಯಯಿಸಬೇಕಾಗುತ್ತದೆ. ಅದೆಷ್ಟೋ ವಿದ್ಯಾರ್ಥಿಗಳು ಈಗಾಗಲೇ ಸಿಇಟಿ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದು ಈ ಪರೀಕ್ಷಾ ತಯಾರಿಗೆ ಕೆಲವುದ ಸಲಹೆಗಳನ್ನು ನಾವಿಲ್ಲಿ ನೀಡಲಿದ್ದೇವೆ.
ಸಿಇಟಿ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳು ಬಹುಆಯ್ಕೆಯ ಮಾದರಿಯಲ್ಲಿರುವ ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಅನೇಕ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ, ಏಕೆಂದರೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿಷಯದ ಆಳವಾದ ಅಧ್ಯಯನ ಮುಖ್ಯ. ಇಲ್ಲಿ ವಿದ್ಯಾರ್ಥಿಯು ತಾನು ಆಭ್ಯಾಸ ಮಾಡಿರುವ ವಿಷಯವನ್ನು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಅನ್ವಯಿಸಬಲ್ಲ ಎಂಬುದನ್ನೂ ಪರೀಕ್ಷಿಸಲಾಗುತ್ತದೆ. ದಿನಗಟ್ಟಲೆ ಕಂಠಪಾಠ ಮಾಡಿದ್ದು ಇಲ್ಲಿ ವರ್ಕೌಟ್ ಆಗುವುದಿಲ್ಲ, ಯಾರು ವಿಷಯವನ್ನು ಅರ್ಥ ಮಾಡಿಕೊಂಡು ಓದುತ್ತಾರೋ ಅವರಿಗೆ ಮಾತ್ರ ಯಶಸ್ಸು.
ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯ ತಯಾರಿಯನ್ನು ಪಿಯುಸಿ ಪರೀಕ್ಷೆಯ ಜೊತೆಯಲ್ಲಿಯೇ ಮಾಡಿದ್ದರೆ ಒಳಿತು ಏಕೆಂದರೆ ಎರಡಕ್ಕೂ ಒಂದೇ ಪಠ್ಯವಾದ್ದರಿಂದ ವಿಷಯದ ಬಗ್ಗೆ ಹೆಚ್ಚು ತಿಳಿಯಬಹುದು. ಯಾರು ಪಿಯುಸಿಯಲ್ಲಿ ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಂಡಿರುತ್ತಾರೋ ಅವರಿಗೆ ಸಿಇಟಿ ಸುಲಭ.
ಪರೀಕ್ಷಾ ವಿವರ:
ಸಾಮಾನ್ಯ ಪ್ರವೇಶ ಪರೀಕ್ಷೆಯು ಕೇವಲ ಒಂದು ಗಂಟೆ 20 ನಿಮಿಷಗಳನ್ನು ಪ್ರತಿ ಪೇಪರ್‌ಗೆ ನೀಡಲಾಗಿರುತ್ತದೆ.ಒಟ್ಟಾರೆ ಪರೀಕ್ಷೆಯು 180 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪೇಪರ್ 1 ಗಣಿತ ವಿಷಯವು 60 ಪ್ರಶ್ನೆಗಳನ್ನು ಒಳಗೊಂಡಿದ್ದು ಒಂದು ಪ್ರಶ್ನೆಗೆ ಸರಾಸರಿ 1 ನಿಮಿಷಗಳ ಕಾಲಾವಧಿಯೊಳಗೆ ಉತ್ತಿರಿಸಬೇಕಿರುತ್ತದೆ ಮತ್ತು ಪೇಪರ್ 2- ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ವಿಷಯಗಳು 120 ಪ್ರಶ್ನೆಗಳನ್ನು ಒಳಗೊಂಡಿದ್ದು ಪ್ರತಿ ಪ್ರಶ್ನೆಗೆ ಅರ್ಧ ನಿಮಿಷಗಳೊಳಗೆ ಉತ್ತಿರಿಸಬೇಕಿರುತ್ತದೆ.ಹಾಗಾಗಿ ಬಹಳ ಎಚ್ಚರದಿಂದ ಉತ್ತರಿಸುವುದು ಅಗತ್ಯ. ಇಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.
ಸ್ನೇಹಿತರೊಂದಿಗೆ ಅಧ್ಯಯನ ಮಾಡಿ:
ಪರೀಕ್ಷೆಗೆ ಕೆಲವೇ ದಿನಗಳಿದ್ದು ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯನ್ನು ಒಬ್ಬರೆ ನಡೆಸುವುದಕ್ಕಿಂತ ಸ್ನೇಹಿತರು ಅಥವಾ ಆ ವಿಷಯದಲ್ಲಿ ಪರಿಣಿತಿ ಹೊಂದಿರುವವರ ಜೊತೆ ಚರ್ಚಿಸಿ ಓದುವುದು ಒಳಿತು. ನೀವು ಯಾವಾಗ ಹೆಚ್ಚು ಚರ್ಚೆ ಮಾಡುತ್ತ ಓದುತ್ತಿರೋ ನಿಮಗೆ ವಿಷಯವು ಆಳವಾಗಿ ತಿಳಿಯುವುದು. ಯಾವುದೇ ವಿಷಯದ ಗೊಂದಲಗಳು ಇಲ್ಲಿ ದೂರಾಗುವುದು.ನಿಮಗೆ ಗೊತ್ತಿರದ ವಿಷಯಗಳು ಸ್ನೇಹಿತರಿಂದ ತಿಳಿಯುವುದು.
ಎಸ್ಬಿಐ ಪ್ರೊಬೆಷನರಿ ಆಫೀಸರ್ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗೋಕೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಪ್ರಮುಖ ವಿಷಯಗಳನ್ನು ನೋಟ್ ಮಾಡಿ:
ವಿದ್ಯಾರ್ಥಿಗಳು ಪಠ್ಯಕ್ರಮವನ್ನು ಓದುವಾಗ ಅದರಲ್ಲಿರುವ ಫಾರ್ಮುಲಾ ಮತ್ತು ಪ್ರಮುಖ ವಿಷಯಗಳನ್ನು ನೋಟ್ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಪರೀಕ್ಷಾ ದಿನಗಳು ಹತ್ತಿರುವುದರಿಂದ ವಿಷಯಗಳು ಇನ್ನಷ್ಟು ಆಳವಾಗಿ ನೆನಪಿನಲ್ಲುಳಿಯಲು ಸಹಾಯಕವಾಗುವುದು. ಪರೀಕ್ಷಾ ದಿನ ಮತ್ತು ಪರೀಕ್ಷಾ ಹಿಂದಿನ ದಿನ ಕೂಡ ನಿಮಗೆ ಈ ನೋಟ್ ಹೆಚ್ಚು ಸಹಾಯವಾಗುವುದು ಮತ್ತು ಸಮಯ ಉಳಿತಾಯವಾಗುವುದು.
ಸಮಯ ನಿರ್ವಹಣೆಯನ್ನು ಪ್ರಾಕ್ಟೀಸ್ ಮಾಡಿ:
ವಿದ್ಯಾರ್ಥಿಗಳು ಟೈಂ ಟೇಬಲ್ ಹಾಕಿಕೊಂಡು ಓದುವುದಷ್ಟೇ ಅಲ್ಲ ತಯಾರಿ ವೇಳೆ ಸಮಯ ನಿರ್ವಹಣೆ ಮಾಡುವುದನ್ನು ತಿಳಿಯಿರಿ.ತಯಾರಿ ವೇಳೆ ಸಮಯದ ಕಡೆ ಗಮನವಿರಲಿ ಏಕೆಂದರೆ ಸಿಇಟಿ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ಸರಾಸರಿ ಒಂದು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಹಾಗಾಗಿ ನಿಮ್ಮ ಗ್ರಹಿಕೆಯ ಸಮಯ ಎಷ್ಟಿದೆ ಎಂಬುದನ್ನು ನೀವೆ ಮನದಟ್ಟು ಮಾಡಿಕೊಂಡು ಅಭ್ಯಾಸ ಮಾಡಿ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಬಗೆಹರಿಸುವುದರಿಂದ ನೀವು ಸಮಯದ ಮೇಲೆ ಹಿಡಿತ ಸಾಧಿಸಬಹುದು.
ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಗಮನಿಸಿ:
ಈಗಿನ ದಿನಗಳಲ್ಲಿ ಎಲ್ಲಾ ಮಾಹಿತಿಗಳು ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದು ಪ್ರವೇಶ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಉತ್ತರಿಸಲು ಪ್ರಾರಂಭಿಸಿ.ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಾಗ ಅಲ್ಲಿ ಯಾವ ರೀತಿ ಪ್ರಶ್ನೆಗಳು ಮತ್ತು ಆಯ್ಕೆಗಳನ್ನು ರೂಪಿಸಿದ್ದಾರೆ ಎಂಬುದನ್ನು ಗಮನಿಸಿ ಒಂದೇ ರೀತಿಯ ಪ್ರಶ್ನೆಗಳನ್ನು ಎಷ್ಟು ವಿಧವಾಗಿ ಕೇಳಬಹುದು ಎಂಬುದನ್ನು ನೀವೆ ಊಹಿಸಿಕೊಳ್ಳಿ ಆಗ ಉತ್ತರಿಸುವುದು ಸುಲಭ. ಇದರಿಂದ ಕಲಿಕೆ ಇನ್ನಷ್ಟು ಸುಲಭವಾಗುತ್ತದೆ ಮತ್ತು ನಿಮ್ಮ ಬುದ್ದಿ ಇನ್ನಷ್ಟು ಚುರುಕಾಗುತ್ತದೆ.
ಎಸ್ಎಸ್ಎಲ್ಸಿ ಪಾಸ್ ಆದ ನಂತರ ಮುಂದೇನು? ಇಲ್ಲಿದೆ ಹಲವು ಕೋರ್ಸ್ಗಳು
ಪರೀಕ್ಷಾ ಹಾಲ್ ನಲ್ಲಿ ಹೇಗೆ ಉತ್ತರಿಸಬೇಕು:
ನೀವು ಪರೀಕ್ಷೆಯನ್ನು ಮೊದಲು ಭಾರಿ ಬರೆಯುತ್ತಿರುತ್ತೀರಿ, ಪರೀಕ್ಷೆಗೆ ತಯಾರಿ ನಡೆಸುವಾಗ ನಾನು ಎಲ್ಲವನ್ನೂ ಓದಿದ್ದೇನೆ ಹಾಗೆಯೇ ಪರೀಕ್ಷೆಯಲ್ಲಿ ಬರೆಯುತ್ತೇನೆ ಎಂದು ಅಂದುಕೊಂಡಿರುತ್ತೀರಿ ಆದರೆ ವಿದ್ಯಾರ್ಥಿಗಳು ಇಲ್ಲಿ ಹಲವು ತಪ್ಪುಗಳನ್ನು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು ಸಿಇಟಿ ಮಾತ್ರವಲ್ಲ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಂಡರು ಮೊದಲು ಕೇಳಿರುವ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಇಲ್ಲಿ ಪ್ರಶ್ನೆಗಳು ನೇರವಾಗಿರದೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲೆಂದೇ ವಿಶೇಷವಾಗಿ ರೂಪಿಸಲಾಗಿರುತ್ತದೆ. ಯಾರು ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಓದುತ್ತಾರೋ ಅವರಿಗೆ ಉತ್ತರಿಸುವುದು ಸುಲಭ. ಉತ್ತರಗಳ ಆಯ್ಕೆಯಲ್ಲಿ ಎಚ್ಚರವಹಿಸಿ ಪ್ರಶ್ನೆಗಳನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿರೋ ಅದರಷ್ಟೇ ಎಚ್ಚರವಾಗಿ ಉತ್ತರಗಳನ್ನು ಕೂಡ ಗಮನಿಸಬೇಕಾಗುತ್ತದೆ. ಬಹು ಆಯ್ಕೆಯ ವಿಧಾನವಾಗಿರುವುದರಿಂದ ನೋಡಲು ಒಂದೇ ರೀತಿ ಎನಿಸುವ ಆಯ್ಕೆಗಳನ್ನು ನೀಡಿರುತ್ತಾರೆ. ಅನೇಕ ಮಂದಿ ಎಡವುದು ಈ ಹಂತದಲ್ಲಿ, ಮೇಲ್ನೋಟಕ್ಕೆ ಅವರಿಗೆ ತೋಚುವ ಉತ್ತರವನ್ನು ಗುರುತು ಮಾಡುತ್ತಾರೆ ಆದರೆ ಆ ಉತ್ತರದ ಸೂಕ್ಷ್ಮತೆಗಳನ್ನು ಅರಿಯುವುದಿಲ್ಲ, ಸ್ಪೆಲ್ಲಿಂಗ್ ವ್ಯತ್ಯಾಸ, ಒಂದೇ ರೀತಿಯ ಅರ್ಥ ನೀಡುವ ಪದಗಳು, ಸರಿ ಉತ್ತರಕ್ಕೆ ಹತ್ತಿರವಾದ ಶಬ್ದಗಳು ಹೀಗೆ ಎಲ್ಲವು ವಿದ್ಯಾರ್ಥಿಗಳ ದಾರಿ ತಪ್ಪಿಸಲೆಂದೇ ಕಾದಿರುತ್ತವೆ. ಸರಿಯಾಗಿ ಗಮನಿಸದೆ ಆತುರದಲ್ಲಿ ಎಷ್ಟೋ ಬಾರಿ ಅನೇಕ ವಿದ್ಯಾರ್ಥಿಗಳು ಗೊತ್ತಿದ್ದು ಕೂಡ ತಪ್ಪು ಉತ್ತರ ಅಯ್ಕೆ ಮಾಡಿರುತ್ತಾರೆ. ಹೀಗಾಗಬಾರದೆಂದರೆ ಎರಡೆರಡು ಬಾರಿ ಉತ್ತರಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು.
ಒತ್ತಡದಿಂದ ದೂರಾಗಿ :
ಪರೀಕ್ಷೆ ಹತ್ತಿರವಾದಂತೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದ ಸಹಜ, ಆದರೆ ಆ ಭಯ ಬೇಡ. ನೀವು ಎಷ್ಟು ಸಮಾಧಾನದಿಂದ ಇರುತ್ತೀರೋ ಅಷ್ಟೇ ಸುಲಭವಾಗಿ ಪರೀಕ್ಷೆಯಲ್ಲಿ ಸಫಲರಾಗುತ್ತೀರಿ. ಪರೀಕ್ಷೆಗೆ ಹೋಗುವ ಹಿಂದಿನ ದಿನ ಮತ್ತು ಪರೀಕ್ಷೆ ದಿನ ನಿಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಿ. ಧ್ಯಾನ ಮಾಡುವ ಅಭ್ಯಾಸವಿದ್ದರೆ ಇನ್ನು ಸುಲಭ. ಪರೀಕ್ಷೆಗೂ ಮುನ್ನ ಕಣ್ಣು ಮುಚ್ಚಿ ದೀರ್ಘವಾಘಿ ಉಸಿರಾಡಿ, ಮನಸ್ಸಿನಲ್ಲಿ ನಾನು ಎಲ್ಲವನ್ನು ಓದಿದ್ದೇನೆ ಎಂಬ ಭಾವನೆ ಇರಲಿ ಆಗ ಮಾನಸಿಕವಾಗಿ ಸದೃಢರಾಗುತ್ತೀರಿ. ಶಾಂತಚಿತ್ತರಾಗಿ ಪರೀಕ್ಷೆ ಕೊಠಡಿ ಪ್ರವೇಶಿಸಿದರೆ ಪ್ರವೇಶ ಪರೀಕ್ಷೆಯಲ್ಲಿ ಅರ್ಧ ಗೆದ್ದಂತೆ.
ಪರೀಕ್ಷಾ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ:
ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎಂದು ಚಿಂತಿಗೆ ಒಳಪಟ್ಟು ಆಯಾಸಗೊಳ್ಳದೆ ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡುವುದು ಒಳಿತು. ಇದರಿಂದ ಮೆದುಳು ಇನ್ನಷ್ಟು ಚುರುಕುಗೊಳ್ಳುತ್ತದೆ ಮತ್ತು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಾಯ ಮಾಡುತ್ತದೆ. ಪರೀಕ್ಷಾ ಹಾಲ್‌ನಲ್ಲಿ ಇನ್ನಷ್ಟು ಚುರುಕಿನಿಂದ ಎಲ್ಲ ಪ್ರಶ್ನೆಗಳಿಗೂ ಯಾವುದೇ ಗೊಂದಲವಿಲ್ಲದೆ ಸರಿಯಾಗಿ ಉತ್ತರಿಸಬಹುದು.
ಆರೋಗ್ಯ ಮತ್ತು ಆಹಾರದ ಬಗೆಗೆ ಕಾಳಜಿ ವಹಿಸಿ:
ವಿದ್ಯಾರ್ಥಿಗಳು ಪರೀಕ್ಷಾ ಟೆನ್ಷನ್‌ನಲ್ಲಿ ಆರೋಗ್ಯ ಮತ್ತು ಆಹಾರದ ಬಗೆಗೆ ಹೆಚ್ಚು ನಿರ್ಲಕ್ಷ್ಯ ವಹಿಸುವುದು ಹೆಚ್ಚು ಅಪಾಯಕಾರಿ. ಏಕೆಂದರೆ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯ ಸರಿಯಿಲ್ಲ ಹಾಗಾಗಿ ಪರೀಕ್ಷೆಯನ್ನು ಚೆನ್ನಾಗಿ ಬರೆಯೋಕೆ ಆಗಲಿಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಹೌದು ಇದು ನಿಜಕ್ಕೂ ಅಪಾಯಕಾರಿ ಆರೋಗ್ಯ ಹದಗೆಟ್ಟರೆ ಪರೀಕ್ಷೆಯಲ್ಲಿ ಆಕ್ಟಿವ್ ಆಗಿರಲು ಸಾಧ್ಯವಾಗದೇ ನೀವು ನಿಮ್ಮ ಕೈಯಾರೆ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪ್ರತಿನಿತ್ಯ ನಿದ್ದೆ ಚೆನ್ನಾಗಿ ಮಾಡುವುದರ ಜೊತೆಗೆ ಆಹಾರ ಚೆನ್ನಾಗಿ ಸೇವಿಸಿ ಆರೋಗ್ಯದ ಬಗೆಗೆ ಕೂಡ ಕಾಳಜಿ ವಹಿಸಿ.