ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು 12,075 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದ್ದು,ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧತೆಯನ್ನು ನಡೆಸುತ್ತಿರುತ್ತೀರಿ. ಈ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎನ್ನುವ ಪ್ರಶ್ನೆಗಳು ತಲೆಯಲ್ಲಿರುವು ಸಹಜ.
ಐಬಿಪಿಎಸ್ ಬ್ಯಾಂಕಿಂಗ್ ಪ್ರಿಲಿಮಿನರಿ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಯಾವ ರೀತಿ ಸರಳವಾಗಿ ತಯಾರಿ ನಡೆಸಬಹುದು ಎಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

IBPS ಕ್ಲರ್ಕ್ ಪರೀಕ್ಷೆ ತಯಾರಿಗೆ ಇಲ್ಲಿದೆ ಟಿಪ್ಸ್:
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮೊದಲು ಪರೀಕ್ಷೆಯ ಪಠ್ಯಕ್ರಮವೇನು ಮತ್ತು ಪರೀಕ್ಷೆಯ ಮಾದರಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದರಿಂದ ಅಭ್ಯರ್ಥಿಯು ತಾನು ಹೇಗೆ ಓದಬೇಕು ಎಂದು ಪ್ಲಾನ್ ಮಾಡಿಕೊಳ್ಳಲು ಸುಲಭವಾಗುತ್ತದೆ.
ಐಬಿಪಿಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಇನ್ನು ಪ್ರಿಲಿಮಿನರಿ ಪರೀಕ್ಷೆಯಲ್ಲಿ ಮೂರು ಸೆಕ್ಷನ್‌ಗಳಿರುತ್ತವೆ ಹಾಗೆಯೇ ಪ್ರಮುಖ ಪರೀಕ್ಷೆಯಲ್ಲೂಕೂಡ ಮೂರು ಸೆಕ್ಷನ್‌ಗಳಿರುತ್ತವೆ ಎಂಬುದನ್ನು ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಿ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ನೀಡಲಾಗುವ ಪತ್ರಿಕೆಯ ಅಂಕಗಳು, ಪ್ರಶ್ನೆಗಳು ಮತ್ತು ವಿಷಯಗಳ ವಿವರವನ್ನು ಕೆಳಗೆ ನೀಡಲಾಗಿದೆ.

IBPS ಕ್ಲರ್ಕ್ ಪ್ರಿಲಿಮ್ಸ್ ಪತ್ರಿಕೆಯಲ್ಲಿರುವ ವಿಷಯಗಳು ಮತ್ತು ಅಂಕಗಳ ವಿವರ:
ಇಂಗ್ಲಿಷ್ ಭಾಷೆ - 30 ಅಂಕಗಳಿಗೆ 30 ಪ್ರಶ್ನೆಗಳು
ಸಂಖ್ಯಾತ್ಮಕ ಸಾಮರ್ಥ್ಯ - 35 ಅಂಕಗಳಿಗೆ 35 ಪ್ರಶ್ನೆಗಳು
ರೀಸನಿಂಗ್ ಎಬಿಲಿಟಿ - 35 ಅಂಕಗಳಿಗೆ 35 ಪ್ರಶ್ನೆಗಳು
ಒಟ್ಟು 100 ಅಂಕಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆಗೆ ಅಭ್ಯರ್ಥಿಯು 1 ಗಂಟೆ ಅವಧಿಯಲ್ಲಿ ಆನ್‌ಲೈನ್ ಪರೀಕ್ಷೆ ಬರೆಯಬೇಕಿರುತ್ತದೆ. ಈ ವಿವರಗಳನ್ನು ತಿಳಿದ ಮೇಲೆ ಅಭ್ಯರ್ಥಿಯು ವಿಷಯಕ್ಕೆ ತಕ್ಕಂತೆ ಹೇಗೆ ಪರೀಕ್ಷೆಗೆ ತಯಾರಿ ನಡೆಸಬಹುದು ಎಂದು ತಿಳಿಯಲು ಮುಂದೆ ಓದಿ.

ಇಂಗ್ಲಿಷ್ ಭಾಷೆ ಪತ್ರಿಕೆಗೆ ತಯಾರಿ ಹೇಗಿರಬೇಕು ? :
ಈ ಪತ್ರಿಕೆಗೆ ಸಂಬಂಧಿಸಿದಂತೆ ಇಂಗ್ಲೀಷ್ ಶಬ್ದಕೋಶ, ವ್ಯಾಕರಣ, ತಪ್ಪುಗಳ ತಿದ್ದುವಿಕೆ ಬಗ್ಗೆ ಓದಿಕೊಳ್ಳುವುದು ಒಳಿತು. ಇದಕ್ಕಾಗಿ ನೀವು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದು ಪ್ರಮುಖ ಅಂಶಗಳನ್ನು ನೋಟ್ ಮಾಡಿಕೊಳ್ಳುವುದು ಅಭ್ಯಾಸ ಮಾಡಿ ಇದರಿಂದ ನಿಮ್ಮ ಇಂಗ್ಲೀಷ್ ಬಗೆಗಿನ ಜ್ಞಾನ ಹೆಚ್ಚುತ್ತದೆ.
ಈಗೆಲ್ಲಾ ಮೊಬೈಲ್ ಯುಗ ಹಾಗಾಗಿ ಅಭ್ಯರ್ಥಿಗಳು ಅಂಗೈಯಗಲದ ಮೊಬೈಲ್‌ನಲ್ಲಿಯೂ ಇಂಗ್ಲೀಷ್ ಕಲಿಕೆಯನ್ನು ಮಾಡಬಹುದು. ಅಲ್ಲಿಯೂ ಕೂಡ ಇಂಗ್ಲೀಷ್ ಭಾಷೆಯ ವ್ಯಾಕರಣ ಮತ್ತು ಬರೆಯುವಿಕೆಯ ಬಗೆಗೆ ಹೆಚ್ಚು ಗಮನವಹಿಸಬಹುದು.
ಅಭ್ಯರ್ಥಿಗಳು ಇನ್ನೂ ಹೆಚ್ಚು ಆಳವಾಗಿ ಅಧ್ಯಯನ ಮಾಡಲು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅಭ್ಯಸಿಸಿ ಇದರಿಂದ ನಿಮಗೆ ಇನ್ನಷ್ಟು ಮಾಹಿತಿ ಸಿಗುವುದು ಜೊತೆಗೆ ನೀವು ಆ ವಿಷಯಲ್ಲಿ ಹೆಚ್ಚು ಪಕ್ವತೆಯನ್ನು ಕಾಣಲು ಸಾಧ್ಯವಾಗುವುದು.

ಸಂಖ್ಯಾತ್ಮಕ ಸಾಮರ್ಥ್ಯ ಪತ್ರಿಕೆಗೆ ತಯಾರಿ ಹೇಗಿರಬೇಕು ? :
ಐಬಿಪಿಎಸ್ ಪರೀಕ್ಷೆಗಳಲ್ಲಿ ಹೆಚ್ಚು ಕಷ್ಟಕರವಾದದ್ದು ಅಂದ್ರೆ ಅದು ಸಂಖ್ಯಾತ್ಮಕ ಸಾಮರ್ಥ್ಯ ಪತ್ರಿಕೆ. ಕಾರಣ ಗಣಿತ ವಿಷಯವನ್ನು ಅನೇಕರು ಕಬ್ಬಿಣದ ಕಡಲೆ ಎಂದೇ ಭಾವಿಸಿರುತ್ತಾರೆ. ಇಲ್ಲಿ ಗಣಿತ ಸೂತ್ರಗಳು ಹೆಚ್ಚು ಇರುತ್ತದೆ ಹಾಗಾಗಿ ಅಭ್ಯರ್ಥಿಗೆ ಗಣಿತ ಸುಲಭವಾಗಿದ್ದಲ್ಲಿ ಅಂಕಗಳು ಗಳಿಸುವುದು ಸುಲಭ. ಇನ್ನು ಗಣಿತ ಕಷ್ಟ ಎನ್ನುವವರು ಮಾತ್ರ ಹೆಚ್ಚು ಶ್ರಮವಹಿಸಿ ಅಧ್ಯಯನ ನಡೆಸುವುದು ಅಗತ್ಯ.
ಸಂಖ್ಯಾತ್ಮಕ ಸಮಸ್ಯೆಗಳನ್ನು ಬಿಡಿಸಲು ಇರುವ ಟ್ರಿಕ್ಸ್‌ಗಳು ಮತ್ತು ಶಾರ್ಟ್‌ಕಟ್‌ಗಳನ್ನು ಸ್ನೇಹಿತರಿಂದ, ಎಕ್ಸ್‌ಪರ್ಟ್‌ಗಳಿಂದ ಸಲಹೆಗಳನ್ನು ಪಡೆದುಕೊಂಡು ಅಧ್ಯಯನ ನಡೆಸಿ. ಯಾವ ವಿಷಯ ಹೆಚ್ಚು ಕಷ್ಟ ಎನಿಸುತ್ತದೆಯೋ ಆ ವಿಷಯವನ್ನು ಹೆಚ್ಚು ಅಧ್ಯಯನ ಮಾಡಿ. ಒಮ್ಮೆ ಓದಿದ ಸೂತ್ರಗಳನ್ನು ಪುನಃ ಅಧ್ಯಯನ ಮಾಡಿ ಇದರಿಂದ ನೀವು ಆ ವಿಷಯವನ್ನು ಹೆಚ್ಚು ನೆನಪಿನಲ್ಲಿಡಲು ಸಾಧ್ಯವಾಗುವುದು.

ರೀಸನಿಂಗ್ ಎಬಿಲಿಟಿ ಪತ್ರಿಕೆಗೆ ತಯಾರಿ ಹೇಗಿರಬೇಕು ? :
ರೀಸನಿಂಗ್ ಎಬಿಲಿಟಿ ಪತ್ರಿಕೆಯು ಬೇರೆಲ್ಲಾ ಪತ್ರಿಕೆಗೆ ಹೋಲಿಸಿದಾಗ ಅತೀ ಹೆಚ್ಚು ಸ್ಕೋರ್ ಮಾಡಬಹುದಾದ ಪತ್ರಿಕೆ ಇದಾಗಿರುತ್ತದೆ. ಆದರೆ ಇಲ್ಲಿ ಪ್ರತಿ ವಿಷಯದ ಹಿಂದಿರುವ ಲಾಜಿಕ್‌ಗಳನ್ನು ತಿಳಿದುಕೊಳ್ಳಬೇಕು ಮತ್ತು ಅದಕ್ಕೆ ಬೇಕಾದ ತಯಾರಿ ನಡೆಸಬೇಕು.
ರೀಸನಿಂಗ್ ಎಬಿಲಿಟಿ ಪತ್ರಿಕೆಯಲ್ಲಿ ರಕ್ತ ಸಂಬಂಧಗಳು, ಒಗಟುಗಳು, ರೇಖೀಯ ಮತ್ತು ವೃತ್ತಾಕಾರದ ಆಸನ ವ್ಯವಸ್ಥೆಗಳ ಕುರಿತು, ಕೋಡಿಂಗ್-ಡಿಕೋಡಿಂಗ್, ಡಿಸ್ಟ್ಯಾನ್ಸ್ ಅಂಡ್ ಡೈರೆಕ್ಷನ್, ಅನಾಲಜಿ ಮತ್ತು ಕ್ಲಾಸಿಫಿಕೇಶನ್ ವಿಷಯಗಳು ಸಾಮಾನ್ಯವಾಗಿರುತ್ತವೆ. ಅಭ್ಯರ್ಥಿಯು ಈ ಬಗೆಗೆ ಹೆಚ್ಚು ಗಮನವಹಿಸಿ ಅಧ್ಯಯನ ನಡೆಸುವುದು ಒಳಿತು.
ಅಭ್ಯರ್ಥಿಯು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಎರಡೇ ತಿಂಗಳಿನಲ್ಲಿ ನಿರಂತರ ಅಧ್ಯಯನ ನಡೆಸಿದ್ದಲ್ಲಿ ಖಂಡಿತವಾಗಿಯೂ ಪ್ರಿಲಿಮಿನರಿ ಮತ್ತು ಪ್ರಮುಖ ಪರೀಕ್ಷೆಗಳನ್ನು ಪಾಸ್ ಮಾಡುವುದರಲ್ಲಿ ಸಂಶಯವೇ ಇಲ್ಲ. ಅಭ್ಯರ್ಥಿಯು ಪರೀಕ್ಷೆಯ ಬಗೆಗೆ ಏನದಾರೂ ಗೊಂದಲ ಮತ್ತು ಪ್ರಶ್ನೆಗಳನ್ನು ಹೊಂದಿದ್ದಲ್ಲಿ ಕಮೆಂಟ್ ಮಾಡಬಹುದು. ನಿಮ್ಮ ಪ್ರಶ್ನೆಗೆ ನಾವು ಸಲಹೆ ನೀಡಲಿದ್ದೇವೆ.