ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಭಾಷಣದ ಸಿದ್ದತೆ ಹೀಗಿರಲಿ

Posted By:

ದೇಶದ 70ನೇ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಆಕರ್ಷಣೆ ಎಂದರೆ ಅದು ಅಂದಿನ ಭಾಷಣ.

ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಅತಿಥಿಗಳ ಭಾಷಣವೇ ಹೆಚ್ಚು, ಇದರ ನಡುವೆ ವಿದ್ಯಾರ್ಥಿಗಳಿಂದ ಒಂದೆರೆಡು ಭಾಷಣವಿರುತ್ತದೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಶಿಕ್ಷಕರು ಮತ್ತು ಅತಿಥಿಗಳು ಮಾಡುವ ಭಾಷಣ ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವ ಶಕ್ತಿ ಹೊಂದಿರುತ್ತದೆ. ಅದಕ್ಕಾಗಿ ಅಂದು ವಿದ್ಯಾರ್ಥಿಗಳನ್ನು ಹುರಿದುಂಬಿಸುವಂತಹ ಭಾಷಣ ಮಾಡಿದರೆ ಸೂಕ್ತ.

ಉತ್ತಮ ವಾಗ್ಮಿಗಳು ಎಲ್ಲಿ ಬೇಕಾದರು ಸರಾಗವಾಗಿ ಭಾಷಣ ಮಾಡುವರು, ಆದರೆ ಎಲ್ಲರು ಉತ್ತಮ ವಾಗ್ಮಿಗಳಾಗಿರುವುದಿಲ್ಲ, ಹಾಗೆಂದ ಮಾತ್ರಕ್ಕೆ ವಾಗ್ಮಿಗಳು ಮಾತ್ರ ಭಾಷಣ ಮಾಡಲು ಸೂಕ್ತ ಎಂದುಕೊಳ್ಳಬಾರದು. ಎಲ್ಲರಲ್ಲು ಒಬ್ಬ ಸುಂದರ ಮಾತುಗಾರ ಇದ್ದೇ ಇರುತ್ತಾನೆ. ಅದನ್ನು ಪತ್ತೆ ಮಾಡಬೇಕಷ್ಟೆ.

ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣದ ಸಿದ್ದತೆ

ನಿಮ್ಮಲ್ಲಿರುವ ಮಾತುಗಾರನನ್ನು ನೀವು ಮೊದಲು ಪತ್ತೆಮಾಡಿ ನಂತರ ಭಾಷಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು. ನಿಮ್ಮ ಸಿದ್ದತೆ ಹೇಗಿರಬೇಕು ಎನ್ನಲು ಇಲ್ಲಿದೆ ಕೆಲವು ಸೂಕ್ತ ಸಲಹೆಗಳು

ಮೊದಲನೆಯದಾಗಿ ಮೊದಲಿಗೆ ಭಾಷಣದ ವಿಷಯವನ್ನು ನೀವು ಸ್ಪಷ್ಟ ಪಡಿಸಿಕೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭವಾಗಿರುವುದರಿಂದ ನೀವು ಇತಿಹಾಸವನ್ನು ಅರಿಯಬೇಕಾದ್ದು ಸೂಕ್ತ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಪರಿ, ಹೋರಾಟದ ದಿನಗಳು, ನಂತರದ ಬೆಳವಣಿಗೆಗಳು, ಹೀಗೆ ಪ್ರಮುಖ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್  ಹೀಗೆ ಮುಂತಾದ ಮಹಾಚೇತನಗಳ ಬದುಕಿನ ಬಗ್ಗೆ ತಿಳಿದುಕೊಂಡಿದ್ದರೆ ನಿಮ್ಮ ಭಾಷಣ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಸ್ಪಷ್ಟ ಮಾಹಿತಿಗಳನ್ನು ಇಟ್ಟುಕೊಂಡು ಉದಾಹರಣೆಗಳನ್ನು ನೀಡುತ್ತ ಮಾತನಾಡುತ್ತಿದ್ದರೆ ಎಂಥವರಿಗೂ ನಿಮ್ಮ ಭಾಷಣದ ಮೇಲೆ ಆಸಕ್ತಿ ಮೂಡುತ್ತದೆ.

ಭಾಷಣದ ಆರಂಭವನ್ನು ಕತೆ ಅಥವಾ ಉದಾಹರಣೆಗಳೊಂದಿಗೆ ಅರಂಭಿಸುವುದು ಸೂಕ್ತ. ಏಕೆಂದರೆ ಆರಂಭದಲ್ಲಿಯೇ ಕೇಳುಗರನ್ನು ನೀವು ಹಿಡಿದಿಟ್ಟುಕೊಳ್ಳಬಹುದು. ಅದಕ್ಕಾಗಿ ನೀವು ಭಾಷಣಕ್ಕೆ ಸಿದ್ದತೆ ನಡೆಸುವಾಗಲೇ ಚಿಕ್ಕ ಟಿಪ್ಪಣಿಗಳನ್ನು ಸಿದ್ದ ಮಾಡಿಕೊಳ್ಳಬೇಕಾಗುತ್ತದೆ. ಅನೇಕ ಕುತೂಹಲಕಾರಿ ವಿಷಯಗಳನ್ನು ಬರೆದಿಟ್ಟುಕೊಂಡು ನಿಮ್ಮ ಭಾಷಣಕ್ಕೆ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ.

ಉತ್ತಮ ಉದಾಹರಣೆಗಳು ಮತ್ತು ಕತೆಗಳನ್ನು ನೀವು ಹೇಳಬೇಕೆಂದರೆ ನಿಮಗೆ ಓದುವ ಹವ್ಯಾಸವಿರಬೇಕು. ನಿರಂತರವಾಗಿ ಪ್ರಸಿದ್ಧ ಲೇಖಕರ ಬರಹಗಳನ್ನು, ಲೇಖನಗಳನ್ನು ಮತ್ತು ದಿನಪತ್ರಿಕೆಗಳನ್ನು ಓದುತ್ತಿದ್ದರೆ ನಿಮ್ಮ ಭಾಷಣಕ್ಕೆ ಅವು ಸಹಕಾರಿಯಾಗುತ್ತವೆ. ಇನ್ನು ಇತ್ತೀಚಿನ ದಿನಗಳಲ್ಲಿ ದೇಶದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೇರಿಸಿಕೊಂಡರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಜೊತೆಗೆ ಮಾಹಿತಿ ಕೂಡು ನೀಡಿದಂತಾಗುತ್ತದೆ.

ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡುವ ಹಾಗಿ ಮಾತನಾಡುವುದರ ಜೊತೆಗೆ ದೇಶಸೇವೆ ಹೇಗೆ ಮಾಡಬೇಕೆಂಬುದನ್ನು ತಿಳಿಸುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಈಗಿನಿಂದಲೇ ದೇಶಸೇವೆ ಬಗ್ಗೆ ಅರಿವು ಮೂಡಿದರೆ ಮುಂದೊಂದು ದಿನ ಅವರು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ.

English summary
Independence Day is near and if you have been given the honour to deliver a speech, there can't be a better opportunity to grab.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia