Karnataka State Anthem Lyrics : ಕರ್ನಾಟಕ ನಾಡಗೀತೆಯ ಸಾರಾಂಶ ಏನು ? ಇಲ್ಲಿದೆ ಮಾಹಿತಿ

ಜಯ ಭಾರತ ಜನನಿಯ ತನುಜಾತೆ ಒಂದು ಕನ್ನಡ ಕವಿತೆಯಾಗಿದ್ದು ಇದನ್ನು ಭಾರತೀಯ ಕನ್ನಡಿಗ ಕವಿ ಕುವೆಂಪು ಅವರು ರಚಿಸಿದ್ದಾರೆ. ಈ ಕವಿತೆಯನ್ನು ಜನವರಿ 6,2004 ರಂದು ಕರ್ನಾಟಕ ರಾಜ್ಯದ ರಾಜ್ಯ ಗೀತೆ/ನಾಡಗೀತೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಈ ಗೀತೆಯಲ್ಲಿ ನಾಡು, ನುಡಿ, ಭಾಷೆ, ಸಹಬಾಳ್ವೆ, ಆತ್ಮವಿಶ್ವಾಸ, ಶಕ್ತಿ ಮತ್ತು ಘನತೆಯನ್ನು ಕಾಪಾಡಿಕೊಳ್ಳುವ ಕರ್ನಾಟಕದ ಹೆಮ್ಮೆಯನ್ನು ವರ್ಣಿಸಲಾಗಿದೆ. ಇಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಮ್ಮ ನಾಡಗೀತೆಯ ಸಾಹಿತ್ಯದ ಸಂಪೂರ್ಣ ಅರ್ಥವನ್ನು ಮತ್ತು ಸಾರಾಂಶವನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ನೀವು ಓದಿ ನಮ್ಮ ನಾಡಗೀತೆಯ ಅರ್ಥವನ್ನು ತಿಳಿದುಕೊಳ್ಳಿ.

ಕರ್ನಾಟಕ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಗೀತೆಯ ಸಾರಾಂಶ ಇಲ್ಲಿದೆ

ಶೀರ್ಷಿಕೆ : ಜಯ ಭಾರತ ಜನನಿಯ ತನುಜಾತೆ
ಕವಿ : ಕುವೆಂಪು
ಪ್ರಾಕಾರ : ನಾಡಗೀತೆ / ರಾಷ್ಟ್ರಭಕ್ತಿಗೀತೆ
ಭಾಷೆ : ಕನ್ನಡ

ಕರ್ನಾಟಕ ನಾಡಗೀತೆ ಸಾಹಿತ್ಯ ಮತ್ತು ಅರ್ಥ :

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ.

ಭಾರತಮಾತೆಯ ಮಗಳಾದ ಕರ್ನಾಟಕ ಮಾತೆಗೆ ಜಯವಾಗಲಿ ಎಂದು ಈ ಗೀತೆಯ ಮೂಲಕ ಶುಭ ಕೋರಲಾಗಿದೆ. ಸುಂದರವಾದ ನದಿಗಳು, ಕಾಡುಗಳು ಇರುವ ಈ ಭೂಮಿಗೆ ಜಯವಾಗಲಿ ಮತ್ತು ಅನೇಕ ಸಂತರ ವಾಸಸ್ಥಾನವಾಗಿರುವ ಈ ನಾಡಿಗೆ ಜಯವಾಗಲಿ ಎಂದು ಪ್ರಥಮ ಪ್ಯಾರಾದಲ್ಲಿ ಉಲ್ಲೇಖಿಸಲಾಗಿದೆ.

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ.
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.

ಈ ಭೂದೇವಿಯ ಕಿರೀಟದಲ್ಲಿ ಭಾರತವು ಒಂದು ಹೊಸ ಆಭರಣವಿದ್ದಂತೆ ಅದು ಸುಂದರವಾದ ಚಿನ್ನ ಮತ್ತು ಗಂಧದ ಗಣಿಯಾಗಿ ಹೊಳೆಯತ್ತಿದೆ. ರಾಮ ಮತ್ತು ಕೃಷ್ಣನ ಅವತಾರಗಳನ್ನು ಹೊಂದಿರುವ ಭಾರತ ಮಾತೆಯ ಮಗಳಾದ ಕರ್ನಾಟಕ ಮಾತೆ ನಿನಗೆ ಜಯವಾಗಲಿ ಎಂದು ಉದ್ಘರಿಸಲಾಗಿದೆ.

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.

ನಾಡಿನ ವೇದಗಳ ಘೋಘಣೆಯು ತಾಯಿಗೆ ಲಾಲಿಯಾಗಿದೆ ಮತ್ತು ನಮ್ಮ ಜೀವನದ ಉತ್ಸಾಹವು ಆಕೆಯ ಜೀವನವಾಗಿದೆ. ಹಸಿರು ಪರ್ವತಗಳ ಸಾಲುಗಳು ತಾಯಿಗೆ ಹಾರಗಳು. ಕಪಿಲ, ಪತಂಜಲಿ, ಗೌತಮ ಮತ್ತು ಜಿನರಿಂದ ಕೊಂಡಾಡಿದ ಭಾರತಮಾತೆಯ ಮಗಳಾದ ಕರ್ನಾಟಕ ಮಾತೆ ನಿನಗೆ ಜಯವಾಗಲಿ ಎಂದು ತುಂಬಿದ ಮನದಿಂದ ಅಭಿನಂದಿಸಲಾಗಿದೆ.

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ.
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ.
ನಾನಕ ರಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.

ಶಂಕರ, ರಾಮಾನುಜ, ವಿದ್ಯಾರಣ್ಯ, ಬಸವೇಶ್ವರರು ನೆಲೆಸಿದ ಪುಣ್ಯದ ನಾಡಿದು. ರನ್ನ, ಷಡಕ್ಷರಿ, ಪೊನ್ನ, ಪಂಪ, ಲಕ್ಷ್ಮೀಶ ಮತ್ತು ಜನ್ನರು ಹುಟ್ಟಿದ ಪುಣ್ಯಭೂಮಿಯಿದು. ಕುಮಾರವ್ಯಾಸ ಜನಿಸಿದ ಮಂಗಳಕರವಾದ ನಾಡಿದು. ಅನೇಕ ಕವಿ ಕೋಗಿಲೆಗಳು ಜನಿಸಿದ ಪುಣ್ಯದ ಬೀಡು ಮತ್ತು ನಾನಕ್, ರಮಾನಂದ ಮತ್ತು ಕಬೀರರಿಗೆ ಹಾಗೂ ಅನೇಕ ಪ್ರಸಿದ್ಧಿಗಳಿಗೆ ಜನ್ಮ ನೀಡಿದ ಭಾರತಮಾತೆಯ ಮಗಳು ಕರ್ನಾಟಕ ಮಾತೆಗೆ ಜಯವಾಗಲಿ ಎಂದು ಈ ಮೂಲಕ ಧನ್ಯವಾದ ತಿಳಿಸಲಾಗಿದೆ.

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ.
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.

ತೈಲಪ ಮತ್ತು ಹೊಯ್ಸಳರು ಆಳಿದ (ಹಿಂದೆ) ಈ ನಾಡು ಮತ್ತು ಡಂಕಣ ಹಾಗೂ ಜಕ್ಕನರ ಪ್ರೀತಿಯ ತವರೂರಿದು. ಕೃಷ್ಣ, ಶರಾವತಿ, ತುಂಗಾ ಮತ್ತು ಕಾವೇರಿಯರ ಉಗಮದ ನಾಡು ಮತ್ತು ಚೈತನ್ಯ, ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರಿಗೆ ಜನ್ಮನೀಡಿದ ಭಾರತಮಾತೆಯ ಮಗಳಾದ ಕರ್ನಾಟಕ ಮಾತೆ ನಿನಗೆ ಜಯವಾಗಲಿ ಎಂದು ನಾಡನ್ನು ಬಣ್ಣಿಸಲಾಗಿದೆ.

ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ.

ಎಲ್ಲಾ ಸಮುದಾಯಗಳನ್ನೊಳಗೊಂಡ ಶಾಂತಿಯ ತೋಟವಿದು ಮತ್ತು ರಸಿಕರ ಕಣ್ಣು ಮತ್ತು ಮನಸ್ಸೆಳೆಯುವ ದೃಶ್ಯವನ್ನು ಹೊಂದಿರುವ ಬೀಡಿದು. ಹಿಂದೂಗಳು, ಕ್ರಿಶ್ಚಿಯನ್ನರು, ಮುಸ್ಲಿಮರು, ಪಾರ್ಸಿಗಳು ಮತ್ತು ಜೈನರು (ಬೆಳೆಯುವ) ಉದ್ಯಾನವನ್ನು ಹೊಂದಿರುವ ಪ್ರಸಿದ್ಧ ನಾಡಿದು. ಜನಕನಂತಿರುವ ಅನೇಕ ರಾಜರ ಅರಮನೆಗಳು ಹಾಗೂ ಗಾಯಕರು ಮತ್ತು ಸಂಗೀತಗಾರರಿಗೆ ಜನ್ಮವಿತ್ತ ಕರ್ನಾಟಕ ಮಾತೆಗೆ ಸದಾ ಚಿರರುಣಿ.

ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ.
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ.

ಕನ್ನಡ ನುಡಿಯನ್ನು ಆರಾಧಿಸುವ ಮತ್ತು ಸಂತೋಷದಿಂದ ಮಾತನಾಡುವ ಮಕ್ಕಳನ್ನು ಹೊಂದಿರುವ ಭಾರತ ಮಾತೆಯ ಮಗಳಾದ ಕರ್ನಾಟಕ ಮಾತೆ ನಿನಗೆ ಜಯವಾಗಲಿ. ಸುಂದರವಾದ ನದಿಗಳು ಮತ್ತು ವನಗಳನ್ನು ಹೊಂದಿರುವ ಭೂಮಿಗೆ ಜಯವಾಗಲಿ ಮತ್ತು ರಸಋಷಿಗಳ ವಾಸಸ್ಥಾನವಾಗಿರುವ ಈ ನಾಡಿಗೆ ಜಯವಾಗಲಿ ಎಂದು ಸರ್ವ ಕೊಡುಗೆಯೂ ನೀಡಿರುವ ಆ ತಾಯಿ ಭಾರತಾಂಬೆಯ ಮಗಳಾದ ಕರ್ನಾಟಕ ದೇವಿಗೆ ನಮಸ್ಕರಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Kannada Rajyotsava special: Karnataka State Anthem Lyrics with Meaning in kannada: Jaya Bharata Jananiya Tanujate is a Kannada poem, which was composed by the Indian Kannadiga poet Kuvempu.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X