ಪ್ರತಿ ವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನ, ಲೇಬರ್ಸ್ ಡೇ ಮತ್ತು ಮೇ ದಿನವೆಂದು ಆಚರಿಸಲಾಗುತ್ತದೆ. ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಮೀಸಲಾಗಿದೆ. ಈ ದಿನವನ್ನು ವಿವಿಧ ದೇಶಗಳಲ್ಲಿ ಅಧಿಕೃತ ಸಾರ್ವಜನಿಕ ರಜಾ ದಿನವನ್ನಾಗಿ ಮಾಡಲಾಗಿದೆ. ಕ್ಯೂಬಾ, ಚೀನಾ, ಭಾರತ ಹಾಗೂ ಇತರ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಹಾಗಾದ್ರೆ ಅಂತರರಾಷ್ಟ್ರೀಯ ಕಾರ್ಮಿಕ ದಿನ, ಲೇಬರ್ಸ್ ಡೇ, ವಿಶ್ವ ಕಾರ್ಮಿಕರ ದಿನ ಮತ್ತು ಮೇ ದಿನ ಎಂದೆಲ್ಲಾ ಕಲೆಯಲಾಗುವ ಈ ದಿನದ ಇತಿಹಾಸ ಏನು, ಅದರ ಮಹತ್ವಗಳೇನು? ಈ ದಿನವನ್ನು ಏಕೆ ಆಚರಿಸಲಾಗುತ್ತದೆ ಎನ್ನುವುದನ್ನು ನೋಡೋಣ.

ವಿಶ್ವ ಕಾರ್ಮಿಕರ ದಿನದ ಇತಿಹಾಸ ಮತ್ತು ಮಹತ್ವ:
ದಿನದ 15 ಗಂಟೆಗಳ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡಿದಿದ್ದರಿಂದ ಇದನ್ನು ಹತ್ತಿಕ್ಕುವದಕ್ಕಾಗಿ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು.ಇದರ ಫಲವಾಗಿ ಅಂದರೆ 1916 ರ ಇಸವಿಯಲ್ಲಿ ಅಮೆರಿಕ ಸರ್ಕಾರ 8 ಗಂಟೆಗಳ ಕೆಲಸದ ಸಮಯವನ್ನು ಆದೇಶ ಮಾಡಿತು.
ಆದರೆ ಭಾರತದಲ್ಲಿ 1923 ನೇ ಇಸವಿಯ ಮೇ 1 ರಂದು " ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ " ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆ ಸಮಯದಲ್ಲಿ ಇದನ್ನು 'ಮದ್ರಾಸ್ ಡೆ' ಎಂದು ಕರೆಯಲಾಗುತ್ತಿತು. ಕಾರ್ಮಿಕರ ದಿನಾಚರಣೆಯ ದಿನದಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮತ್ತು ಕಾರ್ಮಿಕರಿಗೆ ಅಂದಿನ ದಿನ ರಜೆ ನೀಡಬೇಕೆಂದು ಸದನದಲ್ಲಿ ಮಸೂದೆ ಮಂಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ವಿವಿಧ ರಾಷ್ಟ್ರಗಳಲ್ಲಿ ವಿವಿಧ ದಿನಗಳಲ್ಲಿಯೂ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಥೀಮ್ ಏನು?:
ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕರಿಗೆ ಗೌರವ ಸಲ್ಲಿಸುವ ಸೂಚಕವಾಗಿ ಆಚರಿಸಲಾಗುತ್ತದೆ. ಪ್ರತಿ ಭಾರಿಯೂ ವಿಶೇಷ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ "ಸಕಾರಾತ್ಮಕ ಸುರಕ್ಷತೆ ಮತ್ತು ಆರೋಗ್ಯ ಸಂಸ್ಕೃತಿಯನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸಿ" ಇದು 2022ರ ವಿಶ್ವ ಕಾರ್ಮಿಕರ ದಿನದ ಥೀಮ್ ಆಗಿದೆ.

ಏಕೆ ಆಚರಿಸಲಾಗುತ್ತದೆ?:
ಪ್ರಪಂಚದಾದ್ಯಂತದ ಕಾರ್ಮಿಕರಿಗೆ ಸಮಾನತೆ ಮತ್ತು ನ್ಯಾಯವನ್ನು ಒದಗಿಸಲು ನಡೆದ ಐತಿಹಾಸಿಕ ತ್ಯಾಗ ಮತ್ತು ಹೋರಾಟವನ್ನು ನೆನಪಿಸಲು ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಈ ದಿನವನ್ನು ಕಾರ್ಮಿಕ ಸಮುದಾಯಗಳ ಕೊಡುಗೆಗೆ ಸ್ಪಂದಿಸುವ ಜೊತೆಗೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಸಲು, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು, ಸಾಮಾಜಿಕ ರಕ್ಷಣೆಯನ್ನು ನೀಡಲು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದಲೂ ಆಚರಣೆಯನ್ನು ಮಾಡಲಾಗುತ್ತದೆ.