ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿರುವ ಬೆನ್ನಲ್ಲೇ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ಆಚರಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತಾಗಿ ಅಧಿಕೃತ ಆದೇಶವನ್ನು ಹೊರಡಿಸಿದ್ದು ನವೆಂಬರ್ 11 ರಂದು ರಾಜ್ಯಾದ್ಯಂತ ವೀರವನಿತೆ ಒನಕೆ ಓಬವ್ವಳ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಕಾರ್ಯಕ್ತಮಗಳಲ್ಲಿ ಭಾಷಣವು ಪ್ರಮುಖವಾಗಿರುತ್ತದೆ ಮತ್ತು ಅಂದು ಓಬವ್ವಳ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ . ಹಾಗಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಒನಕೆ ಓಬವ್ವಳ ಕುರಿತು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಇಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ. ಇದನ್ನು ಓದಿಕೊಂಡು ವಿದ್ಯಾರ್ಥಿಗಳು ಮತ್ತು ಮಕ್ಕಳು ಸಿದ್ಧತೆಯನ್ನು ಮಾಡಿಕೊಳ್ಳಬಹುದು.

ಇತಿಹಾಸದ ಪುಟ ತೆರೆದು ನೋಡುವಾಗ ಅನೇಕ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗವೂ ಒಂದು. ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವಳ ಹೆಸರು. ಆಕೆಯ ಸಾಹಸದ ಕತೆಯನ್ನು ಮುಂದಿನ ಪೀಳಿಗೆಗೂ ಸಾರುವಂತದ್ದು. ಅಂತಹ ಧೀರ ಮಹಿಳೆ ಜನಿಸಿದ ನಾಡಿದು ಮತ್ತು ಅನೇಕ ವೀರನಾರಿಯರನ್ನು ಪಡೆದ ಈ ಭೂಮಿ ನಿಜಕ್ಕೂ ಶ್ರೇಷ್ಠ.
ಓಬವ್ವಳ ದೇಶಪ್ರೇಮದ ಕಥೆ ಕೇಳುವಾಗು ಮೈ ಜುಮ್ಮೆನಿಸುತ್ತದೆ. ಚಿತ್ರದುರ್ಗದ ಪಾಳೆಯಗಾರರಲ್ಲಿ ಕಡೆಯವನಾದ ಮದಕರಿನಾಯಕನಿಗೂ (ಕ್ರಿ.ಶ. 1753-1778) ಹೈದರನಿಗೂ ನಡೆದ ಕಾಳಗ ಪ್ರಸಿದ್ಧವಾಗಿದೆ. ಹೈದರ್ ಈ ಅಭೇದ್ಯ ದುರ್ಗವನನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾರದೆ ಹೋದ. ಕಡೆಗೆ ತನ್ನ ಶತ್ರುವನ್ನು ಭೇದೋಪಾಯದಿಂದಲೇ ಗೆಲ್ಲಬೇಕೆಂದು ಬಯಸಿ, ತನ್ನ ಬೇಹುಗಾರರನ್ನು ಕರೆದು ಕೋಟೆಯ ಕಳ್ಳದಾರಿಗಳನ್ನು ಪತ್ತೆಮಾಡಿ ತಿಳಿಸಬೇಕೆಂದು ಆಜ್ಞೆಮಾಡಿದ. ವೇಷಧಾರಿಗಳಾದ ಆ ಬೇಹುಗಾರರನ್ನು ಕೋಟೆಯ ಸುತ್ತಲೂ ಸುಳಿದಾಡುತ್ತಿರುವಾಗ, ಒಂದು ಪಾರ್ಶ್ವದಲ್ಲಿ ಒಬ್ಬ ಹೆಂಗಸು ಮೊಸರಿನ ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ಆ ಕೋಟೆಯ ಕಡೆ ನಡೆದು ಅದೃಶ್ಯಳಾದದ್ದು ಗಮನಕ್ಕೆ ಬಂತು.
ಚಾರರು, ಆ ದಿಕ್ಕಿನಲ್ಲಿ ಎಲ್ಲಿಯೋ ಕಳ್ಳಗಿಂಡಿಯಿರಬೇಕೆಂದು ಊಹಿಸಿ ಹುಡುಕತೊಡಗಿದಾಗ, ಬಂಡೆಗಳ ಮಧ್ಯೆ ನುಸುಳಿಕೊಂಡು ಹೋಗುವಂತೆ ಒಂದು ಇಕ್ಕಟ್ಟಾದ ಮಾರ್ಗವಿರುವುದು ಕಂಡುಬಂದಿತು. ಈ ಸುದ್ದಿಯನ್ನು ಕೇಳಿದ ನವಾಬನಿಗೆ ತುಂಬ ಸಂತೋಷವಾಯಿತು. ಶತ್ರುಸೈನಿಕರು ಒಬ್ಬೊಬ್ಬರಾಗಿ ಆ ದಾರಿಯ ಮೂಲಕ ಒಳಕ್ಕೆ ಹೋಗಲು ನಿಶ್ಚಯಿಸಿಕೊಂಡರು.
ಆ ಕಳ್ಳದಾರಿಯ ಒಳಭಾಗಕ್ಕೆ ಸ್ವಲ್ಪ ದೂರದಲ್ಲಿಯೇ ಒಂದು ಕೊಳವೂ ಕಾವಲುಗಾರನ ಒಂದು ಬತೇರಿಯೂ ಇದ್ದಿತು. ಸರ್ಪಗಾವಲು ಕಾಯುತ್ತಿದ್ದ ಕಾವಲುಗಾರ ಸ್ವಲ್ಪ ಬಿಡುವು ಮಾಡಿಕೊಂಡು ತನ್ನ ಗುಡಿಸಿಲಿನಲ್ಲಿ ಊಟಮಾಡುತ್ತಿರುವಾಗಲೇ ಆತನ ಹೆಂಡತಿ ಓಬವ್ವ ನೀರು ತರಲೆಂದು ಕೊಳದ ಬಳಿಗೆ ಬಂದಳು. ಆ ವೇಳೆಗೆ ಕಳ್ಳಗಿಂಡಿಯ ಸಮೀಪದಲ್ಲಿ ಶತ್ರುಸೈನಿಕರು ಹೊಂಚುಹಾಕಿ, ಪಿಸಿಪಿಸಿ ಮಾತುಗಳನ್ನಾಡುತ್ತಿದ್ದುದು ಅವಳಿಗೆ ಕೇಳಿಸಿತು. ಆಕೆ ಅದನ್ನು ಗಮನಿಸಿ ಕೂಡಲೆ ಗುಡಿಸಲಿಗೆ ತೆರಳಿ ಒಂದು ಒನಕೆಯನ್ನು ತೆಗೆದುಕೊಂಡು ಬಂದು ಆ ಕಳ್ಳಗಿಂಡಿಯ ಬಳಿ ನಿಂತಳು. ಅತ್ತ ಶತ್ರುಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುವುದೇ ತಡ, ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವುತ್ತಿದ್ದಳು.
ಈ ಹತ್ಯೆ ಕೆಲಕಾಲ ಹೀಗೆಯೇ ಸಾಗಿತು. ಓಬವ್ವನ ಗಂಡ ಮನೆಯಲ್ಲಿ ತನ್ನ ಹೆಂಡತಿಯನ್ನು ಕಾಣದೆ ಹುಡುಕಿಕೊಂಡು ಕಿಂಡಿಯ ಹತ್ತಿರಕ್ಕೆ ಬಂದಾಗ ಆಕೆಯ ಮುಂದೆ ಬಿದ್ದಿದ್ದ ಹೆಣದ ರಾಶಿಯನ್ನೂ ಹರಿಯುತ್ತಿದ್ದ ಕೆನ್ನೇರಿನ ಕಾಲುವೆಯನ್ನೂ ಕಂಡು ಕಂಗೆಟ್ಟನು, ಆಕೆಯ ಹೆಸರು ಹಿಡಿದು ಕೂಗುತ್ತ ಮುಂದುವರಿಯಲು ವೀರಾವೇಶದಲ್ಲಿ ಮೈಮರೆತ್ತಿದ್ದ ಓಬವ್ವ ತನ್ನ ಗಂಡನನ್ನೂ ಹೊಡೆಯುವುದರಲ್ಲಿದ್ದಳು. ಗಂಡ ದೂರ ಸರಿದು ಕೂಡಲೆ ಕಹಳೆಯನ್ನು ಊದಿದ. ಆ ಎಚ್ಚರಿಕೆಯ ದನಿಯನ್ನು ಕೇಳಿದ ಒಡನೆಯೇ ಮದಕರಿನಾಯಕನ ಸೈನಿಕರು ಅತ್ತ ಧಾವಿಸಿಬಂದರು. ಶತ್ರುಸೈನಿಕರೊಂದಿಗೆ ಯುದ್ಧ ಮಾಡಲಾಯಿತು. ಆ ಗೊಂದಲದಲ್ಲಿ ಶತ್ರುಸೈನಿಕನೊಬ್ಬನ ಪೆಟ್ಟಿಗೆ ಸಿಕ್ಕಿ ಓಬವ್ಬಳ ಪ್ರಾಣಪಕ್ಷಿ ಹಾರಿಹೋಯಿತು. ಮದಕರಿನಾಯಕನ ಸೈನಿಕರ ಕೈಮೇಲಾಗಲು ಶತ್ರುಗಳು ಮತ್ತೆ ಹಿಮ್ಮೆಟ್ಟಿದರು. ಕ್ಷಣಮಾತ್ರದಲ್ಲಿ ಅಸದೃಶವಾದ ಕೆಚ್ಚನ್ನು ತೋರಿ ಕಾಳಗದಲ್ಲಿ ಬಲಿಯಾದ ಓಬವ್ವಳ ಸಲುವಾಗಿ ಎಲ್ಲರೂ ಕಣ್ಣೀರಿಟ್ಟರು. ಕಾವಲುಗಾರನ ಹೆಂಡತಿಯಾದ ಓಬವ್ವಳ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆಯ ಓಬವ್ವನ ಕಿಂಡಿ ಎಂಬ ಹೆಸರು ಇಂದಿಗೂ ಪ್ರಸಿದ್ಧಿಯಾಗಿದೆ.