ವಿದ್ಯಾರ್ಥಿಗಳೆ ನಿಮ್ಮ ಕೆಸಿಇಟಿ ಪರೀಕ್ಷೆ ಪೂರ್ವ ತಯಾರಿ ಹೀಗಿರಲಿ

Posted By:

ಶೈಕ್ಷಣಿಕ ಜೀವನದಲ್ಲಿ ಪಿಯುಸಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಘಟ್ಟಗಳು. ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ವಿದ್ಯಾರ್ಥಿಗಳು ಸಿ ಇ ಟಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದರಲ್ಲಿ ನಿರತರಾಗುತ್ತಾರೆ. ವೃತ್ತಿಪರ ಶಿಕ್ಷಣಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯು ಅತ್ಯಂತ ಮಹತ್ವದಾಗಿದ್ದು ಅದಕ್ಕಾಗಿ ವಿಶೇಷ ತಯಾರಿ ನಡೆಸಬೇಕಾಗುತ್ತದೆ. ಪಿಯುಸಿ ಪರೀಕ್ಷೆಗಿಂತ ಹೆಚ್ಚಿನ ಶ್ರಮವನ್ನು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ವ್ಯಯಿಸಬೇಕಾಗುತ್ತದೆ.

ಪ್ರಶ್ವೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ


ಬಹುಆಯ್ಕೆಯ ಮಾದರಿಯಲ್ಲಿರುವ ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಅನೇಕ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ, ಏಕೆಂದರೆ
ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿಷಯದ ಆಳವಾದ ಅಧ್ಯಯನ ಮುಖ್ಯ. ಇಲ್ಲಿ ವಿದ್ಯಾರ್ಥಿಯು ತಾನು ಆಭ್ಯಾಸ ಮಾಡಿರುವ ವಿಷಯವನ್ನು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಅನ್ವಯಿಸಬಲ್ಲ ಎಂಬುದನ್ನೂ ಪರೀಕ್ಷಿಸಲಾಗುತ್ತದೆ. ದಿನಗಟ್ಟಲೆ ಕಂಠಪಾಠ ಮಾಡಿದ್ದು ಇಲ್ಲಿ ವರ್ಕೌಟ್ ಆಗುವುದಿಲ್ಲ, ಯಾರು ವಿಷಯವನ್ನು ಅರ್ಥ ಮಾಡಿಕೊಂಡು ಓದುತ್ತಾರೋ ಅವರಿಗೆ ಮಾತ್ರ ಯಶಸ್ಸು.

ನಿಮ್ಮ ತಯಾರಿ ಹೀಗಿರಲಿ

ಪ್ರವೇಶ ಪರೀಕ್ಷೆಯ ತಯಾರಿಯನ್ನು ಪಿಯುಸಿ ಪರೀಕ್ಷೆಯ ಜೊತೆಯಲ್ಲಿಯೇ ಮಾಡುವುದು ಒಳಿತು ಏಕೆಂದರೆ ಎರಡಕ್ಕೂ ಒಂದೇ ಪಠ್ಯವಾದ್ದರಿಂದ ವಿಷಯದ ಬಗ್ಗೆ ಹೆಚ್ಚು ತಿಳಿಯಬಹುದು. ಯಾರು ಪ್ರಥಮ ಪಿಯುಸಿಯಲ್ಲಿ ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಂಡಿರುತ್ತಾರೋ ಅವರಿಗೆ ಸಿಇಟಿ ಸುಲಭ.
ಸಾಮಾನ್ಯ ಪ್ರವೇಶ ಪರೀಕ್ಷೆಯು ಕೇವಲ ಒಂದು ಗಂಟೆಯ ಅವಧಿಯದಾಗಿದ್ದು ಇಲ್ಲಿ ವಿದ್ಯಾರ್ಥಿಯು ಅರವತ್ತು ನಿಮಿಷಗಳಲ್ಲಿ ಅರವತ್ತು ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾಗಿರುತ್ತದೆ.  ಪ್ರತಿ ಪ್ರಶ್ನೆಗೆ ಉತ್ತರಿಸಲು ಒಂದು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಹಾಗಾಗಿ ಬಹಳ ಎಚ್ಚರದಿಂದ ಉತ್ತರಿಸುವುದು ಅಗತ್ಯ.

ಸ್ನೇಹಿತರೊಂದಿಗೆ ಅಭ್ಯಾಸ ಮಾಡಿ

ಸಿಇಟಿ ಪರೀಕ್ಷೆಗೆ ಒಬ್ಬರೆ ಓದುವುದಕ್ಕಿಂತ ಸ್ನೇಹಿತರು ಅಥವಾ ಆ ವಿಷಯದಲ್ಲಿ ಪರಿಣಿತಿ ಹೊಂದಿರುವವರ ಜೊತೆ ಚರ್ಚಿಸಿ ಓದುವುದು ಒಳಿತು. ನೀವು ಯಾವಾಗ ಹೆಚ್ಚು ಚರ್ಚೆ ಮಾಡುತ್ತ ಓದುತ್ತಿರೋ ನಿಮಗೆ ವಿಷಯವು ಆಳವಾಗಿ ತಿಳಿಯುವುದು.

ತಯಾರಿ ವೇಳೆ ಸಮಯದ ಕಡೆ ಗಮನವಿರಲಿ

ಸಿಇಟಿ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ಕೇವಲ ಒಂದು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಹಾಗಾಗಿ ನಿಮ್ಮ ಗ್ರಹಿಕೆಯ ಸಮಯ ಎಷ್ಟಿದೆ ಎಂಬುದನ್ನು ನೀವೆ ಮನದಟ್ಟು ಮಾಡಿಕೊಂಡು ಅಭ್ಯಾಸ ಮಾಡಿ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಬಗೆಹರಿಸುವುದರಿಂದ ನೀವು ಸಮಯದ ಮೇಲೆ ಹಿಡಿತ ಸಾಧಿಸಬಹುದು.

ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು

ಸಿಇಟಿ ಮಾತ್ರವಲ್ಲ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಂಡರು ಮೊದಲು ಕೇಳಿರುವ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳನ್ನು ಎರಡು ಮೂರು ಬಾರಿ ಓದಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಇಲ್ಲಿ ಪ್ರಶ್ನೆಗಳು ನೇರವಾಗಿರದೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲೆಂದೇ ವಿಶೇಷವಾಗಿ ರೂಪಿಸಲಾಗಿರುತ್ತದೆ. ಯಾರು ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಓದುತ್ತಾರೋ ಅವರಿಗೆ ಉತ್ತರಿಸುವುದು ಸುಲಭ.

ಉತ್ತರಗಳ ಆಯ್ಕೆಯಲ್ಲಿ ಎಚ್ಚರವಹಿಸಿ

ಪ್ರಶ್ನೆಗಳನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿರೋ ಅದರಷ್ಟೇ ಎಚ್ಚರವಾಗಿ ಉತ್ತರಗಳನ್ನು ಕೂಡ ಗಮನಿಸಬೇಕಾಗುತ್ತದೆ. ಬಹು ಆಯ್ಕೆಯ ವಿಧಾನವಾಗಿರುವುದರಿಂದ ನೋಡಲು ಒಂದೇ ರೀತಿ ಎನಿಸುವ ಆಯ್ಕೆಗಳನ್ನು ನೀಡಿರುತ್ತಾರೆ. ಅನೇಕ ಮಂದಿ ಎಡವುದು ಈ ಹಂತದಲ್ಲಿ ಮೇಲ್ನೋಟಕ್ಕೆ ಅವರಿಗೆ ತೋಚುವ ಉತ್ತರವನ್ನು ಗುರುತು ಮಾಡುತ್ತಾರೆ ಆದರೆ ಆ ಉತ್ತರದ ಸೂಕ್ಷ್ಮತೆಗಳನ್ನು ಅರಿಯುವುದಿಲ್ಲ, ಸ್ಪೆಲ್ಲಿಂಗ್ ವ್ಯತ್ಯಾಸ, ಒಂದೇ ರೀತಿಯ ಅರ್ಥ ನೀಡುವ ಪದಗಳು, ಸರಿ ಉತ್ತರಕ್ಕೆ ಹತ್ತಿರವಾದ ಶಬ್ದಗಳು ಹೀಗೆ ಎಲ್ಲವು ವಿದ್ಯಾರ್ಥಿಗಳ ದಾರಿ ತಪ್ಪಿಸಲೆಂದೇ ಕಾದಿರುತ್ತವೆ. ಸರಿಯಾಗಿ ಗಮನಿಸದೆ ಆತುರದಲ್ಲಿ ಎಷ್ಟೋ ಬಾರಿ ಅನೇಕ ವಿದ್ಯಾರ್ಥಿಗಳು ಗೊತ್ತಿದ್ದು ಕೂಡ ತಪ್ಪು ಉತ್ತರ ಅಯ್ಕೆ ಮಾಡಿರುತ್ತಾರೆ. ಹೀಗಾಗಬಾರದೆಂದರೆ ಎರಡೆರಡು ಬಾರಿ ಉತ್ತರಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು. ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುವಾಗ ಅಲ್ಲಿ ಯಾವ ರೀತಿ ಪ್ರಶ್ನೆಗಳು ಮತ್ತು ಆಯ್ಕೆಗಳನ್ನು ರೂಪಿಸಿದ್ದಾರೆ ಎಂಬುದನ್ನು ಗಮನಿಸಿ ಒಂದೇ ರೀತಿಯ ಪ್ರಶ್ನೆಗಳನ್ನು ಎಷ್ಟು ವಿಧವಾಗಿ ಕೇಳಬಹುದು ಎಂಬುದನ್ನು ನೀವೆ ಊಹಿಸಿಕೊಳ್ಳಿ ಆಗ ಉತ್ತರಿಸುವುದು ಸುಲಭ. 

ಒತ್ತಡದಿಂದ ದೂರಾಗಿ

ಪರೀಕ್ಷೆ ಹತ್ತಿರವಾದಂತೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದ ಸಹಜ, ಆದರೆ ಆ ಭಯ ಬೇಡ. ನೀವು ಎಷ್ಟು ಸಮಾಧಾನದಿಂದ ಇರುತ್ತೀರೋ ಅಷ್ಟೇ ಸುಲಭವಾಗಿ ಪರೀಕ್ಷೆಯಲ್ಲಿ ಸಫಲರಾಗುತ್ತೀರಿ. ಪರೀಕ್ಷೆಗೆ ಹೋಗುವ ಹಿಂದಿನ ದಿನ ಮತ್ತು ಪರೀಕ್ಷೆ ದಿನ ನಿಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಿ. ಧ್ಯಾನ ಮಾಡುವ ಅಭ್ಯಾಸವಿದ್ದರೆ ಇನ್ನು ಸುಲಭ. ಪರೀಕ್ಷೆಗೂ ಮುನ್ನ ಕಣ್ಣು ಮುಚ್ಚಿ ದೀರ್ಘವಾಘಿ ಉಸಿರಾಡಿ, ಮನಸ್ಸಿನಲ್ಲಿ ನಾನು ಎಲ್ಲವನ್ನು ಓದಿದ್ದೇನೆ ಎಂಬ ಭಾವನೆ ಇರಲಿ ಆಗ ಮಾನಸಿಕವಾಗಿ ಸದೃಢರಾಗುತ್ತಿರ. ಶಾಂತಚಿತ್ತರಾಗಿ ಪರೀಕ್ಷೆ ಕೊಠಡಿ ಪ್ರವೇಶಿಸಿದರೆ ಪ್ರವೇಶ ಪರೀಕ್ಷೆಯಲ್ಲಿ ಅರ್ಧ ಗೆದ್ದಂತೆ.

English summary
few useful tips that will help aspiring students ace the KCET 2017 examinations

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia