ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷಾ ಸೂಚನೆಗಳು

Posted By:

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆಗಳನ್ನು ನೀಡಲಾಗಿದೆ, ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಸೂಚನೆಗಳನ್ನು ಗಮನಿಸಲು ಕೋರಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪ್ರಶ್ನೆಪ್ರತ್ರಿಕೆ ಮತ್ತು ಅಂಕಗಳ ವಿವರ

 1. ಈ 04 ಪರೀಕ್ಷೆಗಳಲ್ಲಿ ಎರಡು ವಿಧದ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲಾಗುತ್ತದೆ. ಓ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಹಾಗೂ ವಿವರಣಾತ್ಮಕ ಉತ್ತರಗಳನ್ನು ಬರೆಯಲು ಪ್ರತ್ಯೇಕವಾದ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುವುದು. ಪ್ರಶ್ನೆಪತ್ರಿಕೆ ಪುಸ್ತಿಕೆ ಒಳಭಾಗದಲ್ಲಿ ಓ.ಎಂ.ಆರ್. ಉತ್ತರಪತ್ರಿಕೆಯನ್ನು ಅಳವಡಿಸಲಾಗಿದ್ದು, ಪ್ರಶ್ನೆಪತ್ರಿಕೆ ಪುಸ್ತಿಕೆ ಸೀಲ್ ತೆರೆಯುವಾಗ ಅಭ್ಯರ್ಥಿಗಳು ಜೋಪಾನವಾಗಿ ತೆರೆಯಬೇಕಾಗಿರುತ್ತದೆ. ಪ್ರಶ್ನೆಪತ್ರಿಕೆ ಪುಸ್ತಿಕೆ ಮೇಲೆ ಕ್ರಮಸಂಖ್ಯೆಯನ್ನು ನೀಡಲಾಗಿದೆ. ವಿವರಣಾತ್ಮಕ ಪ್ರಶ್ನೆಗಳನ್ನು ಉತ್ತರಿಸಲು ಪ್ರತ್ಯೇಕ ಖಾಲಿ ಹಾಳೆಗಳುಳ್ಳ ಪುಸ್ತಿಕೆಗಳನ್ನು ನೀಡಲಾಗುವುದು.
 2. ಒಂದಕ್ಕಿಂತ ಹೆಚ್ಚು ಜಿಲ್ಲೆಯಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ಪಡೆದ ಎಲ್ಲಾ ಪ್ರವೇಶ ಪತ್ರಗಳನ್ನು ನಿಗದಿತ ನಮೂನೆಯೊಂದಿಗೆ ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರಿಗೆ ಒಪ್ಪಿಸುವುದು. ತಪ್ಪಿದಲ್ಲಿ ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.
 3. ಅಭ್ಯರ್ಥಿಗಳು ಮಾಹಿತಿಯನ್ನು ಆನ್‍ಲೈನ್ ಮೂಲಕ ಅರ್ಜಿ ನಮೂನೆಯಲ್ಲಿ ಭರ್ತಿಮಾಡಿರುವಂತೆ ತಮ್ಮ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿಯೂ ಮಾಹಿತಿಯನ್ನು ಭರ್ತಿಮಾಡುವುದು.
  ಪರೀಕ್ಷಾ ಸೂಚನೆಗಳು
 4.  ಅಭ್ಯರ್ಥಿಗಳು ತಮ್ಮ ಓ.ಎಂ.ಆರ್. ಉತ್ತರಪತ್ರಿಕೆಯಲ್ಲಿ ಪ್ರಶ್ನೆಪತ್ರಿಕೆ ಪುಸ್ತಿಕೆಯ ಕ್ರಮಸಂಖ್ಯೆಯನ್ನು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಂಡಿರುವ ನೋಂದಣಿ ಸಂಖ್ಯೆಯನ್ನು ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ನೀಲಿ/ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಬರೆದು ತುಂಬಬೇಕು. ವಿವರಣಾತ್ಮಕ ಉತ್ತರ ಪತ್ರಿಕೆಗಳ ಮುಖಪುಟದಲ್ಲಿ ಕೇಳಿರುವ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು.
 5. ಪರೀಕ್ಷೆಯ ಪ್ರಾರಂಭದಲ್ಲಿಯೇ ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣ ದೋಷಗಳೇನಾದರು ಇವೆಯೇ? ಎಂಬುದನ್ನು ಪರೀಕ್ಷಿಸಿ ಖಾತರಿ ಮಾಡಿಕೊಳ್ಳಬೇಕು. ಒಂದು ವೇಳೆ ದೋಷಗಳಿದ್ದರೆ, ದೋಷರಹಿತವಾದ ಮತ್ತೊಂದು ಪ್ರಶ್ನೆಪತ್ರಿಕೆಯನ್ನು ಪಡೆಯುವುದು.
 6. ಅಭ್ಯರ್ಥಿ ತನ್ನ ಎಡಗೈ ಹೆಬ್ಬೆರಳಿನ ಗುರುತನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ಹಾಕುವುದು. ಎಡಗೈ ಹೆಬ್ಬೆರಳ ಗುರುತು ರಹಿತ ಉತ್ತರ ಪತ್ರಿಕೆಯನ್ನು ಯಾವುದೇ ಸೂಚನೆ ನೀಡದೆ ತಿರಸ್ಕರಿಸಲಾಗುವುದು. ಎಡಗೈ ಹೆಬ್ಬೆರಳ ಗುರುತು ಸ್ಪಷ್ಟವಾಗಿರಬೇಕು .
 7. ಅಭ್ಯರ್ಥಿಗಳು ತಮ್ಮ ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಭರ್ತಿ ಮಾಡುವುದು. ಒಮ್ಮೆ ಬರೆದಿರುವುದನ್ನು ಪುನ: ಹೊಡೆದು ಗಲೀಜು ಮಾಡಬಾರದು.
 8. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ನೀಡುವ ಪ್ರಶ್ನೆಪತ್ರಿಕೆ ಪುಸ್ತಿಕೆ ಮತ್ತು ಉತ್ತರ ಪತ್ರಿಕೆಗಳಲ್ಲಿ ಮುದ್ರಿತವಾಗಿರುವ ಪರೀಕ್ಷಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಅನುಸರಿಸಬೇಕು.
 9. ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಉಪಯೋಗಿಸುವಾಗ ಬಹಳ ಎಚ್ಚರವಹಿಸಬೇಕು ಅದನ್ನು ಮಡಚುವುದಾಗಲೀ, ಹರಿಯುವುದಾಗಲೀ,ಮುದುರುವುದಾಗಲೀ ಮಾಡಬಾರದು. ಉತ್ತರಪತ್ರಿಕೆಯ ಜೊತೆಯಲ್ಲಿ ಯಾವುದೇ ವರ್ಕ್‍ಷೀಟನ್ನು ಕಟ್ಟಬಾರದು.
 10. ಪರೀಕ್ಷಾ ಕೊಠಡಿಯೊಳಕ್ಕೆ ಉತ್ತರಿಸಲು ಬೇಕಾದ ನೀಲಿ ಅಥವಾ ಕಪ್ಪು ಶಾಯಿಯ ಬಾಲ್‍ಪಾಯಿಂಟ್ ಪೆನ್ನನ್ನು ಮಾತ್ರ ಪ್ರವೇಶ ಪತ್ರದೊಂದಿಗೆ ತೆಗೆದುಕೊಂಡು ಹೋಗಬೇಕು.
 11. ಎಲೆಕ್ಟ್ರಾನಿಕ್ಸ್ ವಸ್ತುಗಳಾದ ಕ್ಯಾಲ್‍ಕ್ಯುಲೇಟರ್, ಲಾಗ್‍ಟೇಬಲ್, ಸೆಲ್ಯೂಲಾರ್ ದೂರವಾಣಿ, ಪೇಜರ್ ಮುಂತಾದ ಸಂಪರ್ಕ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ.
 12. ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನೀಡಲಾಗುವುದು.
 13. ಪರೀಕ್ಷೆ ಪ್ರಾರಂಭವಾದ 15 ನಿಮಿಷಗಳ ನಂತರ ಯಾವುದೇ ಕಾರಣಗಳಿಂದ ತಡವಾಗಿ ಬಂದ ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ.
 14. ಪತ್ರಿಕೆಗೆ ನಿಗದಿ ಪಡಿಸಿರುವ ಅವಧಿ ಮುಗಿದ ನಂತರ ಯಾವುದೇ ಅಭ್ಯರ್ಥಿಯು ಉತ್ತರವನ್ನು ಮರು ಪರಿಶೀಲನೆ ಮಾಡುವುದನ್ನು ನಿಷೇಧಿಸಲಾಗಿದೆ.
 15. ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗೆ ನಿಗದಿಪಡಿಸಿರುವ ವೇಳೆ ಮುಗಿದ ಕೂಡಲೇ, ಉತ್ತರಪತ್ರಿಕೆಯನ್ನು ಮೇಲ್ವಿಚಾರಕರಿಗೆ ಒಪ್ಪಿಸಿದ ನಂತರವೇ ಪರೀಕ್ಷಾ ಕೊಠಡಿಯಿಂದ ನಿರ್ಗಮಿಸಬೇಕು.
 16. ಯಾವುದೇ ಅಭ್ಯರ್ಥಿಯು ಬೇರೆ ಅಭ್ಯರ್ಥಿಯ ಅಥವಾ ತನ್ನದೇ ಉತ್ತರ ಪತ್ರಿಕೆಯ ನಕಲು ಮಾಡುವುದು ಅಥವಾ ಬೇರೆಯವರಿಗೆ ಕೊಡಲು ಪ್ರಯತ್ನಿಸುವುದು, ತೆಗೆದುಕೊಳ್ಳಲು ಪ್ರಯತ್ನಿಸುವುದು, ಅನಧಿಕೃತ ಸಹಾಯವನ್ನು ಪಡೆಯಲು ಯತ್ನಿಸುವುದು, ಇವುಗಳನ್ನು ಪರೀಕ್ಷಾ ಕೊಠಡಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.
 17. ಅಭ್ಯರ್ಥಿಯು ಪರೀಕ್ಷಾ ಕಾರ್ಯದಲ್ಲಿರುವ ಸಿಬ್ಬಂದಿಯೊಂದಿಗೆ ಮಾತ್ರ ಶೌಚಾಲಯಕ್ಕೆ ಹೋಗಬೇಕು. ಹೋಗುವ ಸಮಯದಲ್ಲಿ ಯಾವುದೇ ಕಾರಣಕ್ಕೂ ತನ್ನೊಂದಿಗೆ ಪರೀಕ್ಷೆಯ ಯಾವುದೇ ಸಾಮಗ್ರಿಗಳನ್ನು ಶೌಚಾಲಯಕ್ಕೆ ಒಯ್ಯುವಂತಿಲ್ಲ. ಶೌಚಾಲಯಕ್ಕೆ ಹೋಗುವ ಮುನ್ನ ತನ್ನ ಉತ್ತರ ಪತ್ರಿಕೆ ಮತ್ತು ಇತರೆ ಹಾಳೆಗಳನ್ನು ಬೋರಲಾಗಿ ತನ್ನ ಸ್ಥಳದಲ್ಲಿಟ್ಟು ಹೋಗಬೇಕು. ಯಾವುದೇ ಅಭ್ಯರ್ಥಿಯು ಪರೀಕ್ಷಾ ಅವಧಿಯ ಕಡೇ 30 ನಿಮಿಷಗಳಲ್ಲಿ ಶೌಚಾಲಯಕ್ಕೆ ಹೋಗಲು ಅನುಮತಿಸುವುದಿಲ್ಲ.
 18. ಧೂಮಪಾನ, ಚಹಾಪಾನ ಇವುಗಳನ್ನು ಪರೀಕ್ಷಾ ಕೊಠಡಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಇವುಗಳನ್ನು ಪರೀಕ್ಷಾ ಕೊಠಡಿಯೊಳಗೆ ಒಯ್ಯುವುದನ್ನು ನಿಷೇಧಿಸಲಾಗಿದೆ.
 19. ಪ್ರತಿ ಅಭ್ಯರ್ಥಿಯು ಮುಖ್ಯ ಅಧೀಕ್ಷಕರು ಅಥವಾ ಕೊಠಡಿ ಮೇಲ್ವಿಚಾರಕರು ನೀಡಿದ ಸೂಚನೆಗಳಿಗೆ/ನಿಯಮಗಳಿಗೆ ಬದ್ಧರಾಗಿರಬೇಕು. ಕೊಠಡಿ ಮೇಲ್ವಿಚಾರಕರು ಅಥವಾ ಮುಖ್ಯ ಅಧೀಕ್ಷಕರು ಅಭ್ಯರ್ಥಿಗಳ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಪಡೆಯಬಯಸಿದಲ್ಲಿ ಅಭ್ಯರ್ಥಿಗಳು ಆ ಮಾಹಿತಿಯನ್ನು ನೀಡಲು ಸಿದ್ಧರಿರಬೇಕು.
 20. ಅಭ್ಯರ್ಥಿಯು ಪರೀಕ್ಷಾ ಸೂಚನೆ / ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದ ಪಕ್ಷದಲ್ಲಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.schooleducation.kar.nic.in ಗಮನಿಸಿ

English summary
Exam instructions to candidates who are taking the primary school teachers recruitment examination.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia