ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾದ ದಿನವಾದ ಜನವರಿ 26 ಅನ್ನು ಗಣರಾಜ್ಯೋತ್ಸವವನ್ನಾಗಿ ಹೆಮ್ಮೆಯಿಂದ ಆಚರಿಸುತ್ತೇವೆ. ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಈ ದಿನ ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಕೂಡ ಹೌದು.
ಗಣ ರಾಜ್ಯೋತ್ಸವವನ್ನು ಗೌರವದಿಂದ ಬಹಳ ಅರ್ಥಪೂರ್ಣವಾಗಿ ಆಚರಿಸಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಶಾಲಾ-ಕಾಲೇಜು, ಕಚೇರಿಗಳಲ್ಲಿ, ವಿವಿಧ ಇಲಾಖೆಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು.
ಪ್ರತ್ರಿ ರಾಷ್ಟ್ರೀಯ ಹಬ್ಬಗಳಂದು ವಿಶೇಷ ಪಾತ್ರ ವಹಿಸುವುದು ಅಂದಿನ ಭಾಷಣ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಭಾಷಣವು ಅರ್ಥಪೂರ್ಣವಾಗಿದ್ದಷ್ಟು, ಗಣರಾಜ್ಯೋತ್ಸವಕ್ಕೆ ಕಳೆ ತುಂಬುತ್ತದೆ.
ಭಾಷಣ ಹೇಗಿರಬೇಕು?
ಭಾಷಣ ಯಾರೇ ಮಾಡಿದರು ಗಣರಾಜ್ಯೋತ್ಸವ ಹಿನ್ನೆಲೆಯನ್ನು ಚೆನ್ನಾಗಿ ಅರಿತಿರಬೇಕು ಮತ್ತು ಭಾಷಣಕ್ಕೆ ನೀಡಿರುವ ಕಾಲಾವಕಾಶದ ಬಗ್ಗೆ ಗಮನವಿರಬೇಕು.
ನಮ್ಮ ದೇಶದ ಇತಿಹಾಸ, ಇತರೆ ದೇಶಗಳ ಸಂವಿಧನಕ್ಕಿಂತ ನಮ್ಮ ದೇಶದ ಸಂವಿಧಾನದ ವಿಶೇಷತೆ ಹೀಗೆ ಪ್ರಮುಖ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು.
ಭಾಷಣದ ಆರಂಭವನ್ನು ಕತೆ ಅಥವಾ ಉದಾಹರಣೆಗಳೊಂದಿಗೆ ಅರಂಭಿಸುವುದು ಸೂಕ್ತ. ಏಕೆಂದರೆ ಆರಂಭದಲ್ಲಿಯೇ ಕೇಳುಗರನ್ನು ನೀವು ಹಿಡಿದಿಟ್ಟುಕೊಳ್ಳಬಹುದು. ಅದಕ್ಕಾಗಿ ನೀವು ಭಾಷಣಕ್ಕೆ ಸಿದ್ದತೆ ನಡೆಸುವಾಗಲೇ ಚಿಕ್ಕ ಟಿಪ್ಪಣಿಗಳನ್ನು ಸಿದ್ದ ಮಾಡಿಕೊಳ್ಳಬೇಕಾಗುತ್ತದೆ.

ಸ್ಪಷ್ಟ ಮಾಹಿತಿಗಳನ್ನು ಇಟ್ಟುಕೊಂಡು ಉದಾಹರಣೆಗಳನ್ನು ನೀಡುತ್ತ ಮಾತನಾಡುತ್ತಿದ್ದರೆ ಎಂಥವರಿಗೂ ನಿಮ್ಮ ಭಾಷಣದ ಮೇಲೆ ಆಸಕ್ತಿ ಮೂಡುತ್ತದೆ.
ಅನೇಕ ಕುತೂಹಲಕಾರಿ ವಿಷಯಗಳನ್ನು ಬರೆದಿಟ್ಟುಕೊಂಡು ನಿಮ್ಮ ಭಾಷಣಕ್ಕೆ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ. ಉತ್ತಮ ಉದಾಹರಣೆಗಳು ಮತ್ತು ಕತೆಗಳನ್ನು ನೀವು ಹೇಳಬೇಕೆಂದರೆ ನಿಮಗೆ ಓದುವ ಹವ್ಯಾಸವಿರಬೇಕು.
ನಿರಂತರವಾಗಿ ಪ್ರಸಿದ್ಧ ಲೇಖಕರ ಬರಹಗಳನ್ನು, ಲೇಖನಗಳನ್ನು ಮತ್ತು ದಿನಪತ್ರಿಕೆಗಳನ್ನು ಓದುತ್ತಿದ್ದರೆ ನಿಮ್ಮ ಭಾಷಣಕ್ಕೆ ಅವು ಸಹಕಾರಿಯಾಗುತ್ತವೆ. ಇನ್ನು ಇತ್ತೀಚಿನ ದಿನಗಳಲ್ಲಿ ದೇಶದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೇರಿಸಿಕೊಂಡರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಜೊತೆಗೆ ಮಾಹಿತಿ ಕೂಡು ನೀಡಿದಂತಾಗುತ್ತದೆ.
ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡುವ ಹಾಗಿ ಮಾತನಾಡುವುದರ ಜೊತೆಗೆ ದೇಶಸೇವೆ ಹೇಗೆ ಮಾಡಬೇಕೆಂಬುದನ್ನು ತಿಳಿಸುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಈಗಿನಿಂದಲೇ ದೇಶಸೇವೆ ಬಗ್ಗೆ ಅರಿವು ಮೂಡಿದರೆ ಮುಂದೊಂದು ದಿನ ಅವರು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ.
ಗಣರಾಜ್ಯೋತ್ಸವದ ಹಿನ್ನೆಲೆ:
ಆಗಸ್ಟ್ 15,1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4,1947ರಂದು ಶಾಸನಸಭೆಯಲ್ಲಿ ಮಂಡಿಸಿತು.
ನವೆಂಬರ್ 26,1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.