ಈಗಾಗಲೇ ಬೋರ್ಡ್ ಪರೀಕ್ಷೆಗಳು ಆರಂಭವಾಗಿದ್ದು, ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯು ಸಮೀಪಿಸುತ್ತಿದೆ. ಮೊದಲ ಭಾರಿ ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಓದು ಬೋರ್ ಆಗದಿರಲು ಇಲ್ಲಿ ಸಲಹೆಗಳನ್ನು ನೀಡಲಾಗಿದೆ. ಅದನ್ನು ಪಾಲಿಸಿ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಾಗಿ.
ಓದಿನ ಕಡೆ ಹೆಚ್ಚು ಆಸಕ್ತಿ ನೀಡುವುದು ಎಲ್ಲರ ಆಧ್ಯತೆ. ಆದರೆ ದೀರ್ಘವಾಗಿ ಓದುತ್ತ ಕುಳಿತರೆ ನಿಮಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎನ್ನುತ್ತದೆ ಸಂಶೋಧನೆಗಳು. ಏಕೆಂದರೆ ಒಂದೇ ಕಡೆ ಕೂತು ಹೆಚ್ಚು ಸಮಯ ಓದುವುದರಿಂದ ವಿದ್ಯಾರ್ಥಿಗಳು ದಣಿದು ಓದಿನ ವಿಚಾರದಲ್ಲಿ ಬೇಸರ ಮೂಡಬಹುದು. ಇದರ ಪರಿಣಾಮ ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ನಿದ್ದೆಗೆ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಬಹುದಿನಗಳ ಕಾಲ ಓದುವ ಮಂದಿಗೆ ಇದು ಅನ್ವಯವಾಗುತ್ತದೆ.
ಈ ರೀತಿಯ ಸಮಸ್ಯೆಯಿಂದ ಹೊರಬರಲು ಕೆಲವು ಸುಲಭ ಉಪಾಯಗಳಿವೆ ಅದೇನೆಂದರೆ ನೀವು ವಾಸ್ತು ಪ್ರಕಾರ ಓದಬೇಕು! ಅರೆರೆ ಇದೇನಪ್ಪ ವಾಸ್ತು ಪ್ರಕಾರ ಓದಬೇಕು ಅಂತ ತಲೆಕಡಿಸಿಕೊಳ್ಳುತ್ತಿದ್ದಾರ ವಾಸ್ತು ಪ್ರಕಾರ ಓದುವುದು ಎಂದರೆ ನೀವು ಕುಳಿತ ಜಾಗದ ಮೇಲೆ ಗಮನ ಹರಿಸಿ ಓದುವುದು ಎಂದರ್ಥ.
ನೀವು ನಿಮ್ಮ ಓದಿನ ಜಾಗವನ್ನು ಬದಲಾಯಿಸಿಕೊಳ್ಳುವುದರಿಂದ ಓದಿನ ಮೇಲಿನ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಜೊತೆಗೆ ದಣಿವಾಗದಂತೆ ಒಂದಿಷ್ಟು ಬೇಸರ ಮೂಡದಂತೆ ಓದಬಹುದು. ಸಾಧ್ಯವಾದಷ್ಟು ಮನೆಯ ಹೊರಗಡೆ ಓದುವುದನ್ನು ಅಭ್ಯಾಸ ಮಾಡಬೇಕಾಗುತ್ತದೆ. ನೀವು ನಿಮ್ಮ ಮನೆಯ ಹೊರಗೆ ಅಧ್ಯಯನ ಮಾಡಲು ನಿಮ್ಮ ಓದಿಗೆ ಅನುಕೂಲವಾಗುವಂತೆ ಈ ನಾಲ್ಕು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ.

ಮೊದಲನೆಯದು ಗ್ರಂಥಾಲಯ:
ಗ್ರಂಥಾಲಯಗಳು ಓದುಗರಿಗೆ ಯಾವಾಗಲು ಉತ್ತಮ ವಾತಾವರಣವನ್ನೇ ನಿರ್ಮಿಸಿವೆ. ಸದಾ ಪ್ರಶಾಂತತೆಯಿಂದ ಕೂಡಿರುವ ಈ ಸ್ಥಳದಲ್ಲಿ ಜನರು ಓದಲೆಂದೆ ಬರುವುದರಿಂದ ನಿಮಗೂ ಓದಿನ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುತ್ತದೆ. ಅಲ್ಲದೇ ಗ್ರಂಥಾಲಯಗಳಲ್ಲಿ ಸಾಕಷ್ಟು ಸಂಪನ್ಮೂಲಗಳು ದೊರೆಯುವುದರಿಂದ ನೀವು ಮತ್ತಷ್ಟು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಎರಡನೆಯದು ಇಂಟರ್ನೆಟ್ ಕೆಫೆ:
ಇಂದಿನ ವೇಗದ ದಿನಗಳಲ್ಲಿ ಇಂಟರ್ನೆಟ್ ಕೆಫೆ ಕೂಡ ನಿಮಗೆ ಸಹಾಯ ಮಾಡುವ ತಾಣ. ಸಾಮಾನ್ಯವಾಗಿ ಜನರು ಕಂಪ್ಯೂಟರ್ ಜಗತ್ತಿನಲ್ಲಿ ಮುಳುಗಿರುವುದರಿಂದ ಇಲ್ಲಿ ನಿಮಗೆ ಯಾವ ರೀತಿಯ ಅಡಚಣೆಗಳು ಉಂಟಾಗುವುದಿಲ್ಲ. ಅಲ್ಲದೆ ನಿಮಗೆ ಓದಿನಲ್ಲಿ ಏನಾದರು ಗೊಂದಲ ಉಂಟಾದರೆ ಶೀಘ್ರವೇ ನೀವು ಇಂಟರ್ನೆಟ್ ಬಳಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ ಇದರ ನಡುವೆ ಕಾಫಿ ಮತ್ತು ಟೀ ಕೂಡ ನಿಮ್ಮನ್ನು ರಿಫ್ರೆಶ್‍ಗೊಳಿಸುತ್ತದೆ.

ಮೂರನೆಯದು ನಿಮ್ಮ ಸ್ನೇಹಿತರ ಮನೆ:
ಸ್ನೇಹಿತರ ಮನೆ ಎಂದರೆ ನಿಮಗೆ ಬೋರ್ ಆಗುವುದೇ ಇಲ್ಲ. ಅದರಲ್ಲೂ ನಿಮ್ಮ ಮನಸ್ಥಿತಿಯ ಸ್ನೇಹಿತರಾದರೆ ನೀವು ಮತ್ತಷ್ಟು ಕ್ರಿಯಾಶೀಲರಾಗುತ್ತೀರಿ. ನಿಮ್ಮ ಸ್ನೇಹಿತರ ಓದಿನ ಕ್ರಮ ಮತ್ತು ಅವರ ಅಧ್ಯಯನ ಶೈಲಿ ನಿಮಗೆ ಸಾಕಷ್ಟು ಸಹಾಯ ಮಾಡುವುದರ ಜೊತೆಗೆ ಅವರ ಯಶಸ್ಸಿನ ಗುಟ್ಟನ್ನು ನೀವು ಅರಿಯಬಹುದು.
ಆದರೆ ನಿಮ್ಮ ಸ್ನೇಹಿತ ಕೂಡ ನಿಮ್ಮಷ್ಟೇ ಓದಿನ ಆಸಕ್ತಿ ಹೊಂದಿರಬೇಕಾಗುತ್ತದೆ. ಉತ್ತಮ ಸ್ನೇಹಿತರ ಸಂಪಾದನೆ ಮಾಡುವ ಮೂಲಕ ಅವರ ಮನೆಗೆ ಹೋಗುವುದು ಸೂಕ್ತ.

ನಾಲ್ಕನೆಯದಾಗಿ ಉದ್ಯಾನವನಗಳು:
ಸಾಮಾನ್ಯವಾಗಿ ಪಾರ್ಕ್ ಎಂದರೆ ಎಲ್ಲರು ವಿರಮಿಸುವ ಸ್ಥಳ, ಇಲ್ಲಿ ಪ್ರಶಾಂತತೆಯ ಜೊತೆಗೆ ಹೆಚ್ಚು ಸಂತೋಷಕರವಾದ ವಾತಾವರಣವಿರುತ್ತದೆ. ಉತ್ತಮವಾಗಿ ಸ್ವಚ್ಚತೆ ಕಾಪಾಡಿಕೊಂಡಿರುವ ಪಾರ್ಕ್‍ಗಳ ಆಯ್ಕೆ ಮಾಡಿಕೊಂಡರೆ ನಿಮಗೆ ಒಳಿತು, ಅದರಲ್ಲೂ ಮುಂಜಾನೆ ಮತ್ತು ಮುಸ್ಸಂಜೆ ನಿಮ್ಮನ್ನು ರಿಫ್ರೆಶ್ ಮಾಡಲು ಸೂಕ್ತವಾದ ಸಮಯ. ಆದರೆ ಪಾರ್ಕ್‍ಗಳಿಗೆ ಹೋಗುವಾಗ ಸಾಧ್ಯವಾದಷ್ಟು ಒಬ್ಬರೇ ಹೋದರೆ ಉತ್ತಮ ಇಲ್ಲವಾದರೆ ನಿಮ್ಮ ಗಮನ ಓದನ್ನು ಬಿಟ್ಟು ಬೇರೆಡೆ ಸಾಗುವುದೊಂತು ಖಂಡಿತ.