ಕೊರೋನಾ ಸಂಕಷ್ಟದಿಂದಾಗಿ ಬಹುತೇಕ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ. ಹಾಗಾದರೆ ಈ ಆನ್‌ಲೈನ್ ತರಗತಿಗಳಿಂದ ಮಕ್ಕಳ ಕಲಿಕೆ ಹೇಗೆ ಹಾಗೂ ಅದನ್ನು ಯಶಸ್ವಿಗೊಳಿಸುವುದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಸಲಹೆ.
ಆನ್‌ಲೈನ್ ತರಗತಿ ಅಂದ್ರೆ ಕೇವಲ ಪಾಠ ಕೇಳಿ ಸುಮ್ಮನಾಗುವುದಲ್ಲ. ಅದಕ್ಕೂ ಕೆಲವು ತಯಾರಿಗಳನ್ನು ನಡೆಸಬೇಕಾಗುತ್ತದೆ. ಹಾಗಾದಾಗ ಮಾತ್ರ ಆನ್‌ಲೈನ್ ತರಗತಿಯ ಉದ್ದೇಶ ಸದ್ಭಳಕೆಯಾದಂತಾಗುವುದು. ಆನ್‌ಲೈನ್ ತರಗತಿ ಯಶಸ್ವಿಯಾಗುವಂತೆ ಮಾಡುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಟಿಪ್ಸ್ ನೀಡಲಾಗಿದೆ.

ಗುರಿ ಇಟ್ಟುಕೊಳ್ಳಿ:
ಯಾವುದೇ ಅಧ್ಯಯನ ಕೈಗೊಳ್ಳುವ ಮೊದಲು ಗುರಿ ಮುಖ್ಯ. ಈ ಆನ್‌ಲೈನ್ ಕಲಿಕೆಯನ್ನು ಮಾಡುವ ಮೊದಲು ನಿಮ್ಮ ಕನಸುಗಳೇನು ? ಏನು ಅಧ್ಯಯನ ಮಾಡುವ ಇಚ್ಛೆ ಇದೆ. ಅದಕ್ಕೆ ಯಾವ ವಿಷಯವನ್ನು ಓದಬೇಕು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ. ಅದಕ್ಕೆ ಪೂರಕವಾದ ಗುರಿಯನ್ನು ಇಟ್ಟುಕೊಳ್ಳಿ.

ಅಧ್ಯಯನವನ್ನು ಉದ್ಯೋಗದಂತೆ ಮಾಡಿ:
ಅಧ್ಯಯನವನ್ನು ಕೇವಲ ಅಧ್ಯಯನವೆಂದು ಭಾವಿಸದೆ ಉದ್ಯೋಗದಂತೆ ಮಾಡಿ. ಅಂದರೆ ಉದ್ಯೋಗಕ್ಕೆ ನಿಗದಿತ ಸಮಯ ಮತ್ತು ಅದಕ್ಕೆ ಬೇಕಾದ ಸಮಯ ಪಾಲನೆ, ನಿಯಮ ಮತ್ತು ಶಿಸ್ತನ್ನು ಹೇಗೆ ಪಾಲಿಸುತ್ತೇವೆಯೋ ಹಾಗೆಯೇ ಅಧ್ಯಯನದ ಕಡೆಗೂ ಗಮನವಹಿಸಿ. ಉದ್ಯೋಗದಕ್ಕೆ ಪ್ರಾಮುಖ್ಯತೆ ಕೊಡುವಷ್ಟೇ ಅಧ್ಯಯನಕ್ಕೂ ಪ್ರಾಮುಖ್ಯತೆ ನೀಡಿ.

ಅಧ್ಯಯನವನ್ನು ಕೇವಲ ಓದುವುದು ಎಂದು ತಿಳಿಯಬೇಡಿ:
ಅಧ್ಯಯನವನ್ನು ಕೇವಲ ಓದು ಎಂದು ಭಾವಿಸಿದರೆ ಅದು ನಿಮ್ಮ ತಪ್ಪು ತಿಳುವಳಿಕೆ, ಇಲ್ಲಿ ಜ್ಞಾನಾರ್ಜನೆ ಜೊತೆ ಜೊತೆಗೆ ವ್ಯಕ್ತಿಯ ಕೌಶಲ್ಯಗಳು ಕೂಡ ಅಭಿವೃದ್ಧಿಗೊಳ್ಳಲು ಅಡಿಪಾಯ ಸಿಗುತ್ತದೆ. ಹಾಗಾಗಿ ಅಧ್ಯಯನಕ್ಕೆ ಒತ್ತು ಕೊಟ್ಟು ಹೆಚ್ಚು ಗಮನವಹಿಸಿ.

ಸ್ಟಡಿ ಪ್ಲಾನ್ ಮಾಡಿಕೊಳ್ಳಿ:
ಓದುತ್ತೇನೆ ಎಂದು ಕುಳಿತರೆ ಸಾಲದು ಅದಕ್ಕೆ ಸರಿಯಾದ ಪ್ಲಾನ್ ಮಾಡಿ. ಊಟ ತಿಂಡಿ ಸಮಯದಲ್ಲಿ ಅಧ್ಯಯನ ಮಾಡುವುದು ಸರಿಯಲ್ಲ. ಹಾಗಾಗಿ ಯಾವಾಗ ಓದಬೇಕು? ಎಷ್ಟು ಓದಬೇಕು ಮತ್ತು ಯಾವಾಗ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಸ್ಟಡಿ ಪ್ಲಾನ್ ಮಾಡಿಕೊಳ್ಳಿ.

ಸಮಯ ನಿರ್ವಹಣೆ ಮಾಡಿ:
ಆನ್‌ಲೈನ್ ತರಗತಿ ತೆಗೆದುಕೊಳ್ಳುವಾಗಿ ಸಮಯ ನಿರ್ವಹಣೆ ತುಂಬಾನೆ ಮುಖ್ಯವಾಗಿರುತ್ತದೆ. ಯಾಕೆಂದರೆ ದಿನಚರಿಯ ಚಟುವಟಿಕೆಗಳ ನಡುವೆಯೇ ಇದಕ್ಕೂ ಸಮಯ ಮೀಸಲಿಡಬೇಕಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ದಿನಚರಿಯಲ್ಲಿ ಯಾವ ಕೆಲಸ ಯಾವಾಗ ಹೇಗೆ ಮತ್ತು ಎಷ್ಟು ಹೊತ್ತು ಮಾಡಬೇಕು ಮತ್ತು ಎಷ್ಟು ಸಮಯ ಓದಬೇಕು ಎಂದು ಸಮಯ ನಿರ್ವಹಣೆಯನ್ನು ಮಾಡುವುದನ್ನು ಕಲಿಯಿರಿ.

ಓದಲು ಸೂಕ್ತ ಜಾಗ ಆಯ್ಕೆ ಮಾಡಿ:
ಓದುವುದು ಎಂದರೆ ಎಲ್ಲೆಂದರಲ್ಲಿ ಕುಳಿತು ಮಾಡುವುದಲ್ಲ ಅದಕ್ಕೆ ಸೂಕ್ತವಾದ ಬೆಳಕು ಮತ್ತು ಗಾಳಿ ಇರುವ ವಾತಾವರಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಮನೆಯಲ್ಲಿ ನಿಮಗೆ ಇಷ್ಟವಾಗುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಹಾಗೆ ಪ್ರಮುಖವಾಗಿ ಜನರು ಹೆಚ್ಚು ಇರುವ ಸ್ಥಳವನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳಬೇಡಿ ಇದರಿಂದ ನಿಮ್ಮ ಅಧ್ಯಯನಕ್ಕೆ ತೊಂದರೆಯಾಗಬಹುದು. ಹಾಗಾಗಿ ಓದಲು ಸೂಕ್ತ ಜಾಗ ಆಯ್ಕೆ ಮಾಡಿಕೊಳ್ಳುವುದು ಕೂಡ ಅಧ್ಯಯನದಲ್ಲಿ ಪ್ರಮುಖವಾಗ ಭಾಗ.

ಯಾವುದೇ ವಿಷಯಗಳಿಗೂ ಡಿಸ್ಟ್ರಾಕ್ಟ್ ಆಗಬೇಡಿ:
ಆನ್‌ಲೈನ್ ಕಲಿಕೆಯಲ್ಲಿ ಸಾಮಾನ್ಯವಾಗಿ ಮನಸ್ಸು ಆಚೆ ಈಚೆ ಆಗುವುದು ಅಥವಾ ಯಾವುದೋ ವಿಷಯಕ್ಕೆ ಗಮನ ಕೊಡುವುದು ಈ ರೀತಿಯ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ಆದರೆ ಇಂತಹ ಅಡಚಣೆಗಳಿಂದ ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಅಧ್ಯಯನ ಮಾಡುವಾಗ ಯಾವುದೇ ಅಡಚಣೆಗಳಿಗೆ ತಲೆಕೆಡಿಸಿಕೊಳ್ಳದೇ ನಿಮ್ಮ ಗಮನವನ್ನು ಅಧ್ಯಯನದ ಕಡೆಗೆ ಕೇದ್ರೀಕರಿಸಿ.

ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ:
ಈಗಿನವರು ಬಹುತೇಕ ಸಮಯವನ್ನು ಹಾಳು ಮಾಡುವುದು ಈ ಸಾಮಾಜಿಕ ಜಾಲತಾಣಗಳಲ್ಲಿ. ಇನ್ನು ಅಧ್ಯಯನ ಅಂತ ಬಂದಾಗ ಈ ಸಾಮಾಜಿಕ ಜಾಲತಾಣಗಳು ನಿಮ್ಮ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಸಮಯವೂ ಹಾಳು ಹಾಗೆ ನಿಮ್ಮ ಮನಸ್ಸೂ ಹಾಳು. ಹಾಗಾಗಿ ನೀವು ಜೀವನದಲ್ಲಿ ಗುರಿ ಹೊಂದಿರುವಿರಾದರೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಹಾಳು ಮಾಡುವ ಚಟಕ್ಕೆ ದಾಸರಾಗದೆ ಅಧ್ಯನಕ್ಕೆ ಹೆಚ್ಚು ಗಮನ ನೀಡಿ.

ಆನ್‌ಲೈನ್ ರಿಸೋರ್ಸಸ್ ಬಳಕೆ ಮಾಡಿ:
ಅಧ್ಯಯನಕ್ಕೆ ಕೇವಲ ತರಗತಿಗಳಷ್ಟೇ ಅಲ್ಲದೆ ಆನ್‌ಲೈನ್ ನಲ್ಲಿ ಸಿಗುವ ರಿಸೋರ್ಸ್ ಗಳನ್ನು ಬಳಕೆ ಮಾಡಿ. ಇದರಿಂದ ಅಧ್ಯಯನಕ್ಕೆ ಇನ್ನಷ್ಟು ಸಹಾಯವಾಗುತ್ತದೆ.