ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ಈಗಾಗಲೇ ಪ್ರಕಟವಾಗಿದೆ. ಫಲಿತಾಂಶದ ನಂತರ ವಿದ್ಯಾರ್ಥಿಗಳು ಕೋರ್ಸ್ ಮತ್ತು ಕಾಲೇಜು ಆಯ್ಕೆಗಳ ಗೊಂದಲದಲ್ಲಿರುತ್ತೀರಿ ಹಾಗಾಗಿ ಕಾಲೇಜು ಆಯ್ಕೆ ಮಾಡುವಾಗ ಎದುರಾಗುವ ಗೊಂದಲಗಳನ್ನು ದೂರ ಮಾಡಲು ಇಲ್ಲಿ ಸಲಹೆಗಳನ್ನು ನೀಡುತ್ತಿದ್ದೇವೆ.

ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಉತ್ತಮ ಶಿಕ್ಷಣವನ್ನು ಪಡೆಯಲು ಅನೇಕರ ಸಲಹೆಗಳನ್ನು ಆಲಿಸುತ್ತಿರುವಿರಿ ಹೀಗಿರುವಾಗ ಕಾಲೇಜು ಆಯ್ಕೆ ಮಾಡುವಾಗ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಮತ್ತು ಕಾಲೇಜು ಆಯ್ಕೆ ಮಾಡುವ ಮುನ್ನ ಯಾವೆಲ್ಲಾ ಅಂಶಗಳನ್ನು ನೆನಪಿಡಬೇಕು ಎಂದು ಇಲ್ಲಿ ತಿಳಿಸುತ್ತಿದ್ದೇವೆ ಓದಿ ತಿಳಿಯಿರಿ.

ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳ ಆಯ್ಕೆ :
ವಿದ್ಯಾರ್ಥಿಯು ತನ್ನ ಅರ್ಹತೆಗಳ ಮತ್ತು ವೈಯಕ್ತಿಕ ಇಚ್ಚೆಗಳಿಗೆ ತಕ್ಕಂತೆ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳು ಬೇಡ, ಪೋಷಕರ ಹಣಕಾಸು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಕಾಲೇಜು ಮತ್ತು ಸೂಕ್ತ ವಿಷಯಗಳನ್ನು ಆಯ್ಕೆ ಮಾಡಿ.

ಕಾಲೇಜು ವಾತಾವರಣ :
ಓದುವ ವಿದ್ಯಾರ್ಥಿ ಎಲ್ಲಿದ್ದರೂ ಓದುತ್ತಾನೆ ಎನ್ನುವುದು ಸತ್ಯ ಆದರೆ ಓದುವ ಮನಸ್ಸಿಗೆ ವಾತಾವರಣ ಪೂರಕವಾಗಿರಬೇಕು ಎಂಬುದೂ ಅಷ್ಟೇ ಸತ್ಯ. ಹಾಗಾಗಿ ವಿದ್ಯಾರ್ಥಿಯು ಬೆಳೆದು ಬಂದ ವಾತಾವರಣಕ್ಕೆ ಪೂರಕವಾಗಿ ಕಾಲೇಜು ವಾತಾವರಣ ಸೂಕ್ತವಾಗಿದೆಯೇ ? ಮತ್ತು ನಿಮ್ಮ ಮಗು ಆ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ಅವಲೋಕಿಸಿ ನಂತರ ಆಯ್ಕೆ ಮಾಡಿ.

ಅಗತ್ಯ ಸೌಲಭ್ಯಗಳು :
ವಿದ್ಯಾರ್ಥಿಯು ತನ್ನ ಓದಿಗೆ ಅಗತ್ಯವಾದ ಸೌಕರ್ಯಗಳು ಕಾಲೇಜಿನಲ್ಲಿ ಲಭ್ಯವಿದೆಯೇ ಎಂದು ಸ್ಪಷ್ಟಪಡಿಸಿಕೊಳ್ಳಿ. ಉದಾಹರಣೆಗೆ ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯಗಳು, ಸಿಬ್ಬಂದಿ ಮತ್ತು ಇತರೆ ಸೌಲಭ್ಯಗಳಿವೆ ಎಂಬುದನ್ನು ತಿಳಿದುಕೊಳ್ಳಿ. ನಂತರ ನಿಮ್ಮ ವೈಯಕ್ತಿಕ ಆಸಕ್ತಿಗಳ ಅನುಸಾರ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪ್ರಯಾಣ ವ್ಯವಸ್ಥೆ :
ಒಮ್ಮೆ ಕಾಲೇಜು ಆಯ್ಕೆ ಮಾಡುವಾಗ ಅನೇಕ ಅಂಶಗಳಲ್ಲಿ ಈ ಪ್ರಯಾಣ ವ್ಯವಸ್ಥೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮನೆಯಿಂದ ಕಾಲೇಜಿಗೆ ತಲುಪಿಗೆ ಸಮಯ ಮತ್ತು ಅಂತರ ಎಷ್ಟಿದೆ ? ಅದಕ್ಕೆ ಸೂಕ್ತ ವ್ಯವಸ್ಥೆ ಏನಿದೆ ಎಂಬುದನ್ನು ತಿಳಿಯಿರಿ. ಪ್ರಯಾಣ ಬೆಳೆಸುವ ಸಮಯ ಕಡಿಮೆ ಇದ್ದಲ್ಲಿ ಉತ್ತಮ ದಿನನಿತ್ಯದ ಚಟುವಟಿಕೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದೀತು.

ಕೋಚಿಂಗ್ ಸೌಲಭ್ಯಗಳು :
ವಿದ್ಯಾರ್ಥಿಗಳು ಜೀವನದ ಬಹುದೊಡ್ಡ ಗುರಿಗಳನ್ನು ತಲುಪಲು ಈ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಹಂತದಿಂದಲೇ ವಿವಿಧ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಲು ಪ್ರಾರಂಭಿಸುತ್ತಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗೆ ಬೇಕಾದ ಕೋಚಿಂಗ್ ಸೌಲಭ್ಯವಿದೆಯೇ ಅಥವಾ ಇಲ್ಲವಾದಲ್ಲಿ ಬೇರೆ ಪರ್ಯಾಯ ಮಾರ್ಗ ಏನಿದೆ ಎನ್ನುವುದನ್ನು ಕಂಡುಕೊಳ್ಳಿ.
ಒಟ್ಟಾರೆ ವಿದ್ಯಾರ್ಥಿಯು ತನ್ನ ಶಾಲಾ ದಿನಗಳ ನಂತರ ಬಹುದೊಡ್ಡ ವೇದಿಕೆಗೆ ಹೆಜ್ಜೆ ಇಡುವಾಗ ಕಾಲೇಜುಗಳ ಆಯ್ಕೆ ಪ್ರಮುಖವಾಗಿರುತ್ತದೆ. ಒಮ್ಮೆ ಹೆಜ್ಜೆ ಮುಂದಿಡುವಾಗ ಎಲ್ಲವನ್ನೂ ಅವಲೋಕಿಸುವುದು ಒಳಿತು. ಹೀಗಾಗಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವಿವಿಧ ಸಮಸ್ಯೆ ಎದುರಿಸುವುದು ಅಥವಾ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಸಂದರ್ಭಗಳು ಎದುರಾಗುವ ಬದಲು ಕಾಲೇಜು ಆಯ್ಕೆಯ ಸಂದರ್ಭದಲ್ಲಿ ಈ ಅಂಶಗಳನ್ನು ನೆನಪಿಟ್ಟುಕೊಂಡು ಉತ್ತಮ ಕಾಲೇಜು ಆಯ್ಕೆ ಮಾಡಿ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಿ.