ವಿದ್ಯಾರ್ಥಿ ಬದುಕು ಸುಂದರ ಇಲ್ಲಿ ಕಾಣುವ ಕನಸುಗಳು ಬದುಕನ್ನು ಸೃಷ್ಟಿಸಬಲ್ಲ ಮೆಟ್ಟಿಲುಗಳು. ಇದೀಗ ಅನೇಕ ವಿದ್ಯಾರ್ಥಿಗಳು ಕಾಲೇಜು ಹಂತವನ್ನು ಮುಗಿಸಿ ಉದ್ಯೋಗವನ್ನು ಹುಡುಕಲು ನಿರ್ಧರಿಸಿರಬಹುದು ಮತ್ತೇ ಇನ್ನೂ ಕೆಲವು ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಶಿಕ್ಷಣ ಪಡೆಯಲು ನಿರ್ಧರಿಸಿರಬಹುದು. ಈಗ ನಾವು ಹೇಳಲು ಹೊರಟಿರುವ ವಿಷಯವೆಂದರೆ ಇದೀಗ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕಲು ಹೊರಟ ಅಭ್ಯರ್ಥಿಗಳು ಸಂದರ್ಶನಕ್ಕೆ ಯಾವೆಲ್ಲಾ ಪ್ರಮುಖ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ನಾವು ತಿಳಿಸಲಿದ್ದೇವೆ.
ನೀವು ಈಗಾಗಲೇ ಕೆಲಸ ಖಾಲಿ ಇದೆ ಎನ್ನುವ ಬೋರ್ಡ್ ನೋಡಿ ರೆಸ್ಯುಮೆ ಹಾಕಿದ್ದೀರಾ ? ಇನ್ನೇನು ಸಂದರ್ಶನಕ್ಕೆ ಹೋಗುವುದೊಂದೇ ಬಾಕಿ ಇದೆಯಾ? ಹಾಗಿದ್ರೆ ಸಂದರ್ಶನಕ್ಕೆ ಹೋಗುವಾಗ ಈ ಪ್ರಮುಖ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.
1. ನಿಮ್ಮ ರೆಸ್ಯುಮೆಯ ಪ್ರತಿಗಳು:
ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು ಕನಿಷ್ಟ 5 ರಿಂದ 7 ರೆಸ್ಯುಮೆ ಪ್ರತಿಗಳನ್ನು ತೆಗೆದುಕೊಂಡು ಹೋಗುವುದು ಒಳಿತು. ರೆಸ್ಯುಮೆ ಪ್ರತಿಗಳನ್ನು ಪ್ರತ್ಯೇಕ ಫೋಲ್ಡರ್ ಮಾಡಿ ತೆಗೆದುಕೊಂಡು ಹೋಗಿ ಮತ್ತು ರೆಸ್ಯುಮೆಯು ಪ್ರೊಫೆಷನಲ್ ಫೋಲಿಯೋ ಆಗಿರುವುದರಿಂದ ಯಾವುದೇ ಸುಕ್ಕುಗಳಿಲ್ಲದೆ ಮತ್ತು ಮಡಿಚದೆ ಇಟ್ಟುಕೊಂಡು ಅಗತ್ಯವಿದ್ದಾಗ ಸಂದರ್ಶಕರಿಗೆ ನೀಡುವುದು ಒಳಿತು. ನಿಮ್ಮ ಬಳಿ ಅಗತ್ಯ ರೆಸ್ಯುಮೆ ಪ್ರತಿಗಳು ಇಲ್ಲದಿದ್ದಲ್ಲಿ ನೀವು ಅವಕಾಶ ವಂಚಿತರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
2. ಪೆನ್ ಮತ್ತು ಪೇಪರ್ :
ಸಂದರ್ಶನಕ್ಕೆ ಹೋಗುವಾಗ ಪೆನ್ ಮತ್ತು ಪೇಪರ್‌ಗಳನ್ನು ತೆಗೆದುಕೊಂಡು ಹೋಗಿ ಕಾರಣ ಸಂದರ್ಶಕರು ಏನಾದರು ಟಾಸ್ಕ್ ಕೊಟ್ಟಾಗ ಅವರನ್ನೇ ಪೆನ್ ಮತ್ತು ಪೇಪರ್ ಕೇಳಿದರೆ ಚೆನ್ನಾಗಿರುವುದಿಲ್ಲ ಮತ್ತು ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ನೋಟ್ ಮಾಡಿಕೊಳ್ಳಲು ಕೂಡ ಸಹಾಯವಾಗುವುದು. ನೀವು ಅಕ್ಷರಸ್ತರಾಗಿರುವುದರಿಂದ ನಿಮ್ಮ ಬಳಿ ಒಂದು ಪೆನ್ ಮತ್ತು ಪೇಟರ್ ಇಟ್ಟುಕೊಂಡಿರುವುದು ಒಳಿತು.
3. ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳ ನೋಟ್ ನಿಮ್ಮ ಬಳಿ ಇರಲಿ:
ನೀವು ಯಾವುದೇ ಸಂದರ್ಶನಕ್ಕೆ ಹಾಜರಾಗುವಾಗ ನಿಮ್ಮ ಬಳಿ ಒಂದು ನೋಟ್ ಇರಲಿ ಅದರಲ್ಲಿ ಸಂದರ್ಶನಕರು ಕೇಳಬಹುದಾದ 10 ರಿಂದ 15 ಪ್ರಶ್ನೆಗಳು ಮತ್ತು ನೀವು ನೀಡಲು ಸಿದ್ಧರಾಗಿರುವ ಉತ್ತರಗಳ ನೋಟ್ ನಿಮ್ಮ ಬಳಿ ಇರಲಿ. ಏಕೆಂದರೆ ಸಂದರ್ಶನಕ್ಕೆ ಇನ್ನೇನು 2 ರಿಂದ 3 ಗಂಟೆ ಬಾಕಿ ಇದೆ ಎನ್ನುವಾಗ ಆ ನೋಟ್ ನೋಡಿಕೊಂಡು ಸ್ವಲ್ಪ ತಯಾರಿ ನಡೆಸುವುದು ಒಳಿತು.
4. ಅಗತ್ಯ ಉಲ್ಲೇಖಗಳು:
ನೀವು ಈಗಾಗಲೇ ಬೇರೆ ಕಡೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಲ್ಲಿ ಅವುಗಳ ದಾಖಲೆಗಳು ಮತ್ತು ಮಾಡಿರುವ ಸಾಧನೆಗಳ ದಾಖಲೆಗಳನ್ನು ತೆಗೆದುಕೊಂಡಿ ಹೋಗಿ ಮತ್ತು ಯಾರಿಂದಲಾದರೂ ರೆಫರೆನ್ಸ್ ಪಡೆದು ಈ ಸಂದರ್ಶನಕ್ಕೆ ಹಾಜರಾಗಿದ್ದಲ್ಲಿ ಅವರ ವಿವರವನ್ನು ಸಂಪೂರ್ಣವಾಗಿ ನೀಡಿ. ಇದರಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತ / ಸ್ನೇಹಿತೆಯರ ಹೆಸರುಗಳನ್ನು ಸೇರಿಸಬೇಡಿ.
5. ಉಸಿರಾಟದ ಮಿಂಟ್ ಅಥವಾ ಫ್ಲೋಸ್‌ಗಳು ನಿಮ್ಮ ಬಳಿ ಇರಲಿ:
ಸಂದರ್ಶನಕ್ಕೆ ಹೋಗುವಾಗ ನೀವು ಸ್ವಲ್ಪ ಭಯ ಅಥವಾ ಆತಂಕದಲ್ಲಿರುತ್ತೀರಿ ಆದುದರಿಂದ ನಿಮ್ಮ ಬಳಿ ನೆಮ್ಮದಿಯ ಉಸಿರಾಟಕ್ಕೆ ಸಹಾಯವಾಗುವ ಮಿಂಟ್‌ಗಳನ್ನು ಇದ್ದರೆ ಸೇವಿಸುವುದು ಒಳಿತು ಕಾರಣ ಇದರಿಂದ ಬಾಯಿ ಕೂಡ ಫ್ರೆಶ್ ಆಗತ್ತೆ ಜೊತೆಗೆ ನೆಮ್ಮದಿಯ ಉಸಿರಾಟ ಕೂಡ ಮಾಡಬಹುದು.
6. ಬ್ಯಾಗ್ ಅಥವಾ ಪೋರ್ಟ್‌ಫೋಲಿಯೋ ನಿಮ್ಮ ಬಳಿ ಇರಲಿ:
ಉತ್ತಮ ಉಡುಗೆ ತೊಡುಗೆ ಇದ್ದು ಸಂದರ್ಶಕರ ಕಣ್ಣಿಗೆ ನೀವು ಸುಂದರವಾಗಿ ಕಾಣುವಂತೆ ಡ್ರೆಸ್ ಮಾಡಿಕೊಂಡು ಹೋದರೆ ಸಾಲದು, ನಿಮ್ಮ ಬಳಿ ಒಂದು ಬ್ಯಾಗ್ ಅಥವಾ ಪೋರ್ಟ್‌ಫೋಲಿಯೋ ಇದ್ದರೆ ಒಳ್ಳೆಯದು. ಅದರಲ್ಲಿ ಸಂದರ್ಶನಕ್ಕೆ ಬೇಕಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಪ್ರತ್ಯೇಕ ಫೋಲ್ಡರ್ ಮಾಡಿ ಇಟ್ಟುಕೊಂಡರೆ, ಸಂದರ್ಶಕರು ಕೇಳಿದಾಗ ನೀಡಲು ಸಹಾಯವಾಗುತ್ತದೆ ಮತ್ತು ಅದು ಪ್ರೊಫೆಷನಲ್ ಆಗಿ ಕೂಡ ಇರುತ್ತದೆ.
7. ಸಂದರ್ಶನ ಸ್ಥಳದ ವಿವರ:
ಅಭ್ಯರ್ಥಿಗಳು ಅನೇಕ ಸಲ ಎಡವುದು ಇಲ್ಲಿಯೇ! ಸಂದರ್ಶನಕ್ಕೆ ಹೋಗುವ ಭರದಲ್ಲಿ ಸಂದರ್ಶನ ನಡೆಯುವ ಸ್ಥಳದ ಬಗೆಗೆ ಹೆಚ್ಚು ಮಾಹಿತಿ ಪಡೆಯಲು ಮರೆಯುತ್ತಾರೆ ಹಾಗಾಗಿ ಸಂದರ್ಶನಕ್ಕೆ ತಡವಾಗಿ ಹೋಗುವ ತಪ್ಪನ್ನು ಮಾಡುತ್ತಾರೆ. ಇದರಿಂದ ಸಿಗಬಹುದಾದ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆದರೆ ಅಭ್ಯರ್ಥಿಗಳು ಹಿಂದಿನ ದಿನವೇ ಸಂದರ್ಶನದ ಸ್ಥಳದ ಬಗೆಗೆ ಒಂದು ನೋಟ್ ಮಾಡಿಕೊಳ್ಳುವುದು ಅಥವಾ ಲೊಕೇಶನ್ ತಿಳಿದುಕೊಂಡಿರುವುದು ಒಳಿತು. ಹಾಗೆ ಸಂದರ್ಶನಕ್ಕೆ 15 ರಿಂದ 20 ನಿಮಿಷ ಮುಂಚಿತವಾಗಿಯೇ ಹೋಗಿ ಅಲ್ಲಿ ಇರುವುದು ಒಳಿತು.