ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ವಸತಿಯುಕ್ತ ಕಾಲೇಜುಗಳು

Posted By:

ರಾಜ್ಯದ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

2017-18ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸತಿಯುಕ್ತ ಕಾಲೇಜುಗಳ ಯೋಜನೆಯನ್ನು ಮಂಡಿಸಿದ್ದರು. ಅದರಂತೆ ಶೈಕ್ಷಣಿಕವಾಗಿ ಹಿಂದುಳಿದಿರುವ ಕೋಲಾರ, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಕಲಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬೀದರ್‌ ಸೇರಿ 10 ಜಿಲ್ಲೆಗಳಲ್ಲಿ ಒಂದೊಂದು ವಸತಿಯುಕ್ತ ಕಾಲೇಜುಗಳನ್ನು ತೆರೆಯುತ್ತಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಪ್ರತಿ ಕಾಲೇಜಿನಲ್ಲೂ ತಲಾ 360 ವಿದ್ಯಾರ್ಥಿಗಳ ವಸತಿಗೆ ಅನುಕೂಲವಾಗುವಂತೆ ವಿದ್ಯಾರ್ಥಿನಿಲಯಗಳು ನಿರ್ಮಾಣವಾಗಲಿದ್ದು, ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ರಾಜ್ಯಕ್ಕೆ ಹತ್ತು ವಸತಿಯುಕ್ತ ಕಾಲೇಜುಗಳು

ಮೊದಲ ವರ್ಷಕ್ಕೆ ಪ್ರತಿ ಕೋರ್ಸ್‌ಗೆ 40 ವಿದ್ಯಾರ್ಥಿಗಳಂತೆ, ಪ್ರತಿ ಕಾಲೇಜಿನಲ್ಲಿ ಒಟ್ಟು ಮೂರು ಕೋರ್ಸ್‌ಗಳಿಗೆ 120 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಆದೇಶದಲ್ಲಿ ಹೇಳಲಾಗಿದೆ.

ಈ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ಪ್ರವೇಶದ ಅನುಪಾತವನ್ನು 35:65ಕ್ಕೆ ನಿಗದಿಪಡಿಸಲಾಗಿದೆ. ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಶೇ 60 ಸೀಟುಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಉಳಿದ ಶೇ 40ರಷ್ಟು ಸೀಟುಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮೀಸಲು ನಿಗದಿ ಮಾಡಲಾಗಿದೆ.

ನಿರೀಕ್ಷಿತ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದಲ್ಲಿ, ಆ ಸಂಖ್ಯೆಯ ಸೀಟುಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಒದಗಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ಈ ಕಾಲೇಜುಗಳಿಗೆ ಅಗತ್ಯವಿರುವಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆ ಹಾಗೂ ವಿದ್ಯಾರ್ಥಿನಿಲಯಕ್ಕೆ ಅಗತ್ಯವಿರುವ ಹುದ್ದೆಗಳನ್ನು ಸೃಷ್ಟಿಸಲು ಪ್ರತ್ಯೇಕ ಪ್ರಸ್ತಾವ ಸಲ್ಲಿಸುವಂತೆ ಆದೇಶದಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.

ವಸತಿಯುಕ್ತ ಕಾಲೇಜುಗಳ ಕೋರ್ಸುಗಳು

ಬಿ.ಎ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಬಿ.ಎಸ್ಸಿ (ಭೌತ ವಿಜ್ಞಾನ, ಗಣಿತ ವಿಜ್ಞಾನ, ಕಂಪ್ಯೂಟರ್‌ ಸೈನ್ಸ್‌) ಹಾಗೂ ಬಿ.ಕಾಂ (ವಿಶ್ವವಿದ್ಯಾಲಯ ನಿಗದಿಪಡಿಸಿರುವ ವಿಷಯಗಳು) ಕೋರ್ಸ್‌ಗಳು ಇರಲಿವೆ.

ಕಾಲೇಜು ನಿರ್ಮಾಣಕ್ಕೆ 250 ಕೋಟಿ ವೆಚ್ಚ

ಶೈಕ್ಷಣಿಕವಾಗಿ ಹಿಂದುಳಿದ 10 ಜಿಲ್ಲೆಗಳಲ್ಲಿ ಕಾಲೇಜುಗಳಿಗೆ ಬೇಕಾದ ಜಮೀನು ಗುರುತಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಪ್ರತಿ ಕಾಲೇಜಿಗೆ ತಲಾ ₹ 25 ಕೋಟಿಯಂತೆ ಒಟ್ಟು 10 ಕಾಲೇಜುಗಳಿಗೆ ₹250 ಕೋಟಿ ವ್ಯಯಿಸಲು ಸರ್ಕಾರ ಅನುಮೋದನೆ ನೀಡಿದೆ.

English summary
Karnataka higer education department orders to open residential colleges in 10 educational backward districts this year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia