ಸಿಬಿಎಸ್ಇ ಬದಲಾದ ಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ

Posted By:

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನ ಶಿಕ್ಷಣ ಕ್ರಮದಲ್ಲಿ ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಮುಂಬರುವ ಶೈಕ್ಷಣಿಕ ವರ್ಷದಿಂದ ನೂತನ ಏಕರೂಪ ಪದ್ಧತಿ ಕಾರ್ಯರೂಪಕ್ಕೆ ಬರಲಿದೆ.

ಬರುವ ಶೈಕ್ಷಣಿಕ ವರ್ಷದಿಂದ (2017-18) 6 ರಿಂದ 9ನೇ ತರಗತಿಗೆ ಏಕರೂಪ ಮೌಲ್ಯಮಾಪನ, ಪರೀಕ್ಷಾ ವಿಧಾನ ಮತ್ತು ಗ್ರೇಡಿಂಗ್‌ ಪದ್ಧತಿಯನ್ನು ತರುವುದಾಗಿ ಸಿಬಿಎಸ್ಇ ತಿಳಿಸಿದೆ. ಅಲ್ಲದೆ 2009 ರಿಂದ ಇಲ್ಲಿಯವರೆಗೆ ಜಾರಿಯಿದ್ದ ಸಮಗ್ರ ಮತ್ತು ನಿರಂತರ ಮೌಲ್ಯಮಾಪನ ವ್ಯವಸ್ಥೆಯನ್ನು (ಸಿಸಿಇ) ಕೈಬಿಡಲಗಿದೆ.

ಹೊಸ ಪದ್ಧತಿಗೆ ಕಾರಣ

2009 ರಿಂದ ಇಲ್ಲಿಯವರೆಗೆ ಮಂಡಳಿ ಮಾನ್ಯತೆ ಪಡೆದಿರುವ ವಿವಿಧ ಶಾಲೆಗಳಲ್ಲಿ 6 ರಿಂದ 9 ನೇ ತರಗತಿಗೆ ವಿವಿಧ ಮಾನದಂಡಗಳ ಅನ್ವಯ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯುತ್ತಿತ್ತು. ಇದರಿಂದಾಗಿ ಶಾಲೆ ಬದಲಿಸುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು ಅಲ್ಲದೇ ವಿದ್ಯಾರ್ಥಿಗಳು ಒಂದು ಶಾಲೆ ಬಿಟ್ಟು ಮತ್ತೊಂದು ಶಾಲೆ ಸೇರುವಾಗ ಈ ವಿಭಿನ್ನ ಪದ್ಧತಿಗಳು ಅವರಿಗೆ ಮಾರಕವಾಗುತ್ತಿದ್ದವು. ಈ ಕುರಿತು ಮಂಡಳಿಗೆ ಸಾರ್ವಜನಿಕರಿಂದ ಹಲವು ದೂರುಗಳು ಕೂಡ ಬಂದಿದ್ದವು.

ಸಿಬಿಎಸ್ಇ ಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ

ಏಕರೂಪ ವಿಧಾನ

ಈಗ ಬದಲಾಯಿಸಿರುವ ಪದ್ಧತಿಯಂತೆ ಪರೀಕ್ಷಾ ವಿಧಾನದಲ್ಲಿ ಲಿಖಿತ ಪರೀಕ್ಷೆಗೆ 80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ 20 ಅಂಕಗಳು (ಘಟಕ ಪರೀಕ್ಷೆಗೆ 10, ನೋಟ್‌ ಪುಸ್ತಕ ಸಲ್ಲಿಕೆಗೆ 5, ವಿಷಯ ಸಂವರ್ಧನೆಗೆ 5 ಅಂಕಗಳು) ಇರಲಿವೆ. ಶೇ 80:20 ಅಂಕಗಳ ಅನುಪಾತದಲ್ಲಿಯೇ ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆ ನಡೆಯಲಿವೆ.

ಬದಲಾದ ಗ್ರೇಡಿಂಗ್ ವಿಧಾನ

ಮೌಲ್ಯಮಾಪನದಲ್ಲಿ ಏಕರೀತಿಯ ಗ್ರೇಡಿಂಗ್‌ ವಿಧಾನವನ್ನು ಸಿಬಿಎಸ್ಇ ಅಳವಡಿಸಿಕೊಂಡಿದ್ದು ಈ ಪ್ರಕಾರ 6ರಿಂದ 9ನೇ ತರಗತಿವರೆಗೆ ಈ ಕೆಳಕಂಡಂತೆ ಗ್ರೇಡ್ ಗಳನ್ನು ನೀಡಬೇಕು.  ಇದರ ಜೊತೆಗೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ, ಶಿಸ್ತು, ಹಾಜರಾತಿ, ನಡವಳಿಕೆಯನ್ನು ಆಧರಿಸಿ ಅಂಕಪಟ್ಟಿಯಲ್ಲಿ 'ಎ' (ಅತ್ಯುತ್ತುಮ), 'ಬಿ' (ಉತ್ತಮ), 'ಸಿ' (ತೃಪ್ತಿಕರ) ಗ್ರೇಡ್‌ಗಳನ್ನು ನೀಡಬೇಕು.

  • 91 ರಿಂದ 100 ಅಂಕಗಳಿಗೆ 'ಎ1' ಗ್ರೇಡ್‌
  • 81 ರಿಂದ 90 ಅಂಕಗಳಿಗೆ 'ಎ2' ಗ್ರೇಡ್
  • 71 ರಿಂದ 80 ಅಂಕಗಳಿಗೆ 'ಬಿ1' ಗ್ರೇಡ್
  • 61 ರಿಂದ 70 ಅಂಕಗಳಿಗೆ 'ಬಿ2' ಗ್ರೇಡ್
  • 51 ರಿಂದ 60 ಅಂಕಗಳಿಗೆ 'ಸಿ1' ಗ್ರೇಡ್
  • 41 ರಿಂದ 50 ಅಂಕಗಳಿಗೆ 'ಸಿ2' ಗ್ರೇಡ್
  • 33 ರಿಂದ 40 ಅಂಕಗಳಿಗೆ 'ಡಿ' ಗ್ರೇಡ್ 

32 ಕ್ಕೆ ಫೇಲ್

32 ಮತ್ತು ಅದಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗೆ 'ಫೇಲ್‌' ಎಂದು ಅಂಕಪಟ್ಟಿಯಲ್ಲಿ ನಮೂದಿಸಬೇಕಾಗುತ್ತದೆ.

ಸಿಬಿಎಸ್ಇ

ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ, ಖಾಸಗಿ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಿಯಂತ್ರಿಸುತ್ತದೆ. ಮಂಡಳಿಯು 1962 ರಲ್ಲಿ ಸ್ಥಾಪನೆಗೊಂಡು ಈವರೆಗೂ ತನ್ನದೇ ಆದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿದೆ.

ಹೆಚ್ಚಿನ ಮಾಹಿತಿಗಾಗಿ cbse.nic.in ಗಮನಿಸಿ

ಇದನ್ನು ಗಮನಿಸಿ: ಸಿಬಿಎಸ್ಇ ಹತ್ತನೇ ತರಗತಿಗೆ ಆರು ಸಬ್ಜೆಕ್ಟ್ಸ್ ಕಡ್ಡಾಯ

English summary
Now the system of assessment in CBSE schools will be a whole new method. The Central Board of Secondary Education has scrapped out the continuous and comprehensive evaluation (CCE) scheme for classes VI to IX that has been in practice since 2009.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia