ವೈದ್ಯಕೀಯ ಮತ್ತು ದಂತವೈದ್ಯಕೀಯ ಪಿಜಿ ಸೀಟುಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಬಾರಿಯ ನೀಟ್ ಪಿಜಿಯಲ್ಲಿ 5800 ಸೀಟುಗಳನ್ನು ಹೆಚ್ಚಿಸಲಾಗಿದ್ದು, ವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಇದಾಗಿದೆ.
ಬಜೆಟ್ 2018: 50 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ
ಗುಣಮಟ್ಟದ ವೈದ್ಯರು ಮತ್ತು ವೈದ್ಯಕೀಯ ಸೌಲಭ್ಯವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸೀಟು ಹೆಚ್ಚಳ ಮಾಡಲಾಗಿದ್ದು, ದೇಶಾದ್ಯಂತವಿರುವ 479 ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಹೆಚ್ಚಳ ಮಾಡಲಾಗಿದೆ.
ಬಜೆಟ್ 2018: ಡಿಜಿಟಲ್ ಶಿಕ್ಷಣದತ್ತ ಕೇಂದ್ರದ ಚಿತ್ತ
ಪ್ರಸ್ತುತ 479 ವೈದ್ಯಕೀಯ ಕಾಲೇಜುಗಳಲ್ಲಿ 67352 ವೈದ್ಯಕೀಯ ಸೀಟುಗಳಿವೆ. ಕಳೆದ ಮೂರು ವರ್ಷಗಳಲ್ಲಿ 13004 ಸೀಟುಗಳನ್ನು ಹೆಚ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಪ್ರಸಕ್ತ ವರ್ಷದಿಂದಲೇ ಇದು ಜಾರಿಗೆ ಬರಲಿದ್ದು, ದೇಶಾದ್ಯಂತ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹೆಚ್ಚಳ ಮಾಡಲಾಗುವುದು ಎಂಬ ಮಾಹಿತಿ ಲಭಿಸಿದೆ.
ಸೀಟು ಹೆಚ್ಚಳಕ್ಕೆ ಪ್ರಮುಖ ಕಾರಣ
ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಡೆಸಿದ ಸಮೀಕ್ಷೆಯಲ್ಲಿ ಭಾರತದ ವೈದ್ಯರ ಮತ್ತು ಜನಸಂಖ್ಯೆಯ ಅನುಪಾತದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. ಪ್ರತಿ ಸಾವಿರ ಮಂದಿಗೆ ಒಬ್ಬ ವೈದ್ಯನ ಅವಶ್ಯಕತೆ ಇದ್ದು, ಭಾರತದಲ್ಲಿ ಈ ಅನುಪಾತ ಇನ್ನು ಕಡಿಮೆ ಇದೆ.
ವೈದ್ಯರ ಮತ್ತು ಜನಸಂಖ್ಯೆಯ ಅನುಪಾತ ಪ್ರಸ್ತುತ 0.63:1000 ಇದ್ದು, ಅದನ್ನು 1:1000 ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಸದ್ಯ ಭಾರತದಲ್ಲಿ 10.4 ಲಕ್ಷ ವೈದ್ಯರು ನೋಂದಣಿ ಮಾಡಿಸಿದ್ದು, ಇವರಲ್ಲಿ 8.33 ಲಕ್ಷ ಮಾತ್ರ ಸೇವಾನಿರತರಾಗಿದ್ದಾರೆ. ಹೀಗಾಗಿ ವೈದ್ಯರ ಸಂಖ್ಯೆಯನ್ನು ಸರಿದೂಗಿಸಲು ಸೀಟು ಹೆಚ್ಚಳಕ್ಕೆ ಕೇಂದ್ರ ಅವಕಾಶ ಮಾಡಿದೆ.
ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ
ವೈದ್ಯಕೀಯ ಸೀಟುಗಳ ಸಂಖ್ಯೆಯ ಜೊತೆಗೆ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಸ್ಟಾಂಡರ್ಡ್ ನಿಯಮದಂತೆ ಅಗತ್ಯ ಮೂಲ ಸೌಕರ್ಯಗಳುಳ್ಳ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಮಾಹಿತಿಯೊಂದರ ಪ್ರಕಾರ ದೇಶದ 20 ರಾಜ್ಯಗಳ 58 ವಿವಿಧ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಯಾವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇಲ್ಲವೋ ಮತ್ತು ಅತ್ಯವಶ್ಯಕವಾಗಿ ಬೇಕಿದೆಯೋ ಅಂತಹಾ ಕೇಂದ್ರಗಳಲ್ಲಿ ಕಾಲೇಜು ತೆರೆಯಲಾಗುವುದು ಎಂದು ಹೇಳಲಾಗಿದೆ.