ಜೆಇಇ ರ್ಯಾಂಕಿಂಗ್: ರಾಜ್ಯದ ವಿದ್ಯಾರ್ಥಿಗಳ ಸಾಧನೆ

Posted By:

ಜೆಇಇ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದ ವಿದ್ಯಾರ್ಥಿಗಳು ನೂರರ ರ್ಯಾಂಕಿಂಗ್ ಒಳಗೆ ಬರುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳು (ಐಐಟಿ, ಎನ್‌ಐಟಿ, ಐಐಐಟಿ) ಸೇರಿದಂತೆ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರೀಕ್ಷೆ ನಡೆಸಿತ್ತು.

ಆನೇಕಲ್ ನ ಆಂಜನಪ್ಪ (36), ಬೆಂಗಳೂರಿನ ನಿನಾದ್ ಹೇಮಂತ್ ಹುಯಿಲಗೋಳ್ (54), ಉತ್ತರ ಕನ್ನಡ ಜಿಲ್ಲೆ ಶಿರಸಿಯ ವಿಶ್ವಜಿತ್‌ ಪಿ.ಹೆಗಡೆ (65) ರಾಜ್ಯದ ಟಾಪರ್ಸ್ ಎಂದು ಗುರುತಿಸಿಕೊಂಡಿದ್ದಾರೆ.

ಆಂಜನಪ್ಪ ಆನೇಕಲ್‌ ತಾಲ್ಲೂಕಿನ ಚಟ್ನಳ್ಳಿಯವರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಲಿಂಗಮ್ಮ ಕೂಲಿ ಮಾಡಿ ಪ್ರಾಥಮಿಕ ಶಿಕ್ಷಣ ಕೊಡಿಸಿದ್ದರು. ತಪಸ್‌ ಯೋಜನೆಯಡಿ ಆಯ್ಕೆಯಾಗಿ ವಸತಿ ಸಹಿತ ಪಿಯುಸಿ ಹಾಗೂ ಐಐಟಿ-ಜೆಇಇ ತರಬೇತಿಯನ್ನು ಉಚಿತವಾಗಿ ಪಡೆದಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳ ಸಾಧನೆ

ಬೆಂಗಳೂರಿನ ವಿದ್ಯಾರ್ಥಿ ನಿನಾದ್‌ ಹೇಮಂತ್‌ ಹುಯಿಲಗೋಳ ರಾಷ್ಟ್ರ ಮಟ್ಟದಲ್ಲಿ 54ನೇ ರ‍್ಯಾಂಕ್‌ ಪಡೆದಿದ್ದಾರೆ. ಬೆಂಗಳೂರಿನ ಬೇಸ್‌ ತರಬೇತಿ ಸಂಸ್ಥೆ ವಿದ್ಯಾರ್ಥಿಯಾಗಿದ್ದು, 360 ಅಂಕಗಳ ಪೈಕಿ 325 ಅಂಕಗಳನ್ನು ಪಡೆದಿದ್ದಾರೆ.'ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ 12ನೇ ತರಗತಿ ಮುಗಿಸಿದ್ದೇನೆ. ದಿನಕ್ಕೆ ಎರಡರಿಂದ ಮೂರು ತಾಸು ಓದುವಿಕೆಯಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ಭೌತವಿಜ್ಞಾನದಲ್ಲಿ ಆಸಕ್ತಿ ಇದ್ದು, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರವೇಶ ಪಡೆಯಬೇಕೆಂಬ ಬಯಕೆ ಇದೆ' ಎಂದು ನಿನಾದ್‌ ಹೇಳಿದ್ದಾರೆ.

ಶಿರಸಿ ಲಯನ್ಸ್ ಆಂಗ್ಲ ಶಾಲಾ ವಿದ್ಯಾರ್ಥಿ ವಿಶ್ವಜಿತ್ ಪ್ರಕಾಶ್ ಹೆಗಡೆ 2015ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದರು. ಐಐಟಿ ಪ್ರವೇಶ ಪಡೆಯುವ ಇಚ್ಛೆಯಿಂದ ಶಿರಸಿ ನಂತರ ಬೆಂಗಳೂರಿಗೆ ಬಂದು ದೀಕ್ಷಾ ಲರ್ನಿಂಗ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು. ವಿಶ್ವಜಿತ್‌ ಐಐಟಿ ಮುಂಬೈ ಅಥವಾ ಐಐಟಿ ಮದ್ರಾಸ್‌ನಲ್ಲಿ ಪ್ರವೇಶ ಪಡೆಯುವ ಗುರಿ ಹೊಂದಿದ್ದಾರೆ. [ಜೆಇಇ ರ್ಯಾಂಕಿಂಗ್: ಕಾಂಪೌಂಡರ್ ಪುತ್ರ ದೇಶಕ್ಕೆ ಪ್ರಥಮ]

ತಪಸ್ ಯೋಜನೆ

ರಾಷ್ಟ್ರೋತ್ಥಾನ ಪರಿಷತ್ ನ ತಪಸ್ 2012ರಲ್ಲಿ ಪ್ರಾರಂಭವಾಗಿದ್ದು,  ಶಿಕ್ಷಣದಲ್ಲಿ ಪ್ರತಿಭಾವಂತರಾಗಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಪಿಯುಸಿ ಶಿಕ್ಷಣದ ಜೊತೆಗೆ ಐಐಟಿ-ಜೆಇಇ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿ ಸಂಪೂರ್ಣ ಶಿಕ್ಷಣವನ್ನು ಉಚಿತವಾಗಿ ನೀಡುವ ಉದ್ದೇಶ ಹೊಂದಿದೆ.

ಎಸ್ಎಸ್ಎಲ್ಸಿ ನಂತರ ಉನ್ನತ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗದ ಕುಟುಂಬದ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ, ಊಟ, ವಸತಿ, ಸಮವಸ್ತ್ರ, ಪುಸ್ತಕ ಸೇರಿ ಎಲ್ಲಾ ರೀತಿಯ ಸವಲತ್ತು ಮತ್ತು ಅತ್ಯಾಧುನಿಕ ಪ್ರಯೋಗಾಲಯ ಹಾಗೂ ಗ್ರಂಥಾಲಯದ ವ್ಯವಸ್ಥೆಯಲ್ಲಿ ವಿಜ್ಞಾನ ವಿಭಾಗದ ಪಿಯುಸಿ ಶಿಕ್ಷಣ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ಐಐಟಿ, ಜೆಇಇ. ಸಿಇಟಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ.

ತಪಸ್‌ ಯೋಜನೆಯಡಿ ಶಿಕ್ಷಣ ಪಡೆದ 35 ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆ ಬರೆದಿದ್ದು, ಇದರಲ್ಲಿ 31 ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.

ಏಪ್ರಿಲ್‌ 2, 8 ಮತ್ತು 9ರಂದು ದೇಶದ 1,781 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 11 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಜೆಇಇ- ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ಜೆಇಇ-ಅಡ್ವಾನ್ಸ್‌ಡ್‌-2017 ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.

English summary
JEE results announced. Anekal's Anjanappa, Sirsi Vishwajith, Bengaluru student Ninad are the toppers for Karnataka.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia