ಕನ್ನಡ ಭಾಷಾ ಕಲಿಕೆಗೆ ರಾಜ್ಯ ಸರ್ಕಾರದ ಅಧಿಕೃತ ಆದೇಶ

Posted By:

ರಾಜ್ಯದ ಎಲ್ಲ ಮಾಧ್ಯಮ ಶಾಲೆಗಳಲ್ಲೂ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಘೋಷಿಸಿದಂತೆಯೇ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 2017-18ನೇ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ಪ್ರಾರಂಭಿಸಬೇಕು.

ಕಡ್ಡಾಯ ಕನ್ನಡ ಭಾಷಾ ಕಲಿಕೆ

2017 ಜುಲೈನಲ್ಲೇ ಕರಡು ನಿಯಮಗಳನ್ನು ರೂಪಿಸಿದ್ದು, ಆಕ್ಷೇಪಣೆಗೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಯಾವುದೇ ಆಕ್ಷೇಪಣೆಗಳು ಬಾರದ ಹಿನ್ನೆಲೆಯಲ್ಲಿ ಅ.21ರಂದು ರಾಜ್ಯಪತ್ರದಲ್ಲಿ ಆದೇಶ ಪ್ರಕಟಿಸಿದೆ. ವಾರದ ಹಿಂದೆ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಕರಡು ಪ್ರತಿ ಸಲ್ಲಿಸಿ, ಇದನ್ನೇ ಅಂತಿಮಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿತ್ತು.

ಕನ್ನಡ ಭಾಷೆ ಕಲಿಸಲು ಮೀನಾ-ಮೇಷ ಎಣಿಸುತ್ತಿರುವ ಸಿಬಿಎಸ್ಇ

2018-19ನೇ ಶೈಕ್ಷಣಿಕ ವರ್ಷದಿಂದ 1ನೇ ಮತ್ತು 2ನೇ ತರಗತಿಗಳಲ್ಲಿ ಹಾಗೂ 2026- 27ರ ವೇಳೆಗೆ ಹಂತಹಂತವಾಗಿ ವಿಸ್ತರಿಸುವಂತೆ ಕರಡು ಪ್ರತಿಯಲ್ಲಿ ಸೂಚಿಸಲಾಗಿದೆ.

ಯಾವ ಶಾಲೆಯಲ್ಲಿ ಪ್ರಾರಂಭಿಕ ತರಗತಿಯು 1ನೇ ತರಗತಿಯಾಗಿರುವುದಿಲ್ಲವೊ ಅಂತಹ ಶಾಲೆಯಲ್ಲಿನ ಪ್ರಾರಂಭಿಕ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಬೇಕಿದೆ.

ಕನ್ನಡವನ್ನು ಕಡ್ಡಾಯ ಭಾಷೆಯಾಗಿ ಕಲಿಸಲು ಪುಸ್ತಕಗಳ ಮಾಹಿತಿ ನೀಡಲಾಗಿದೆ. 1ರಿಂದ 4ನೇ ತರಗತಿ ಕನ್ನಡ ಪ್ರಥಮ ಭಾಷೆ ಪುಸ್ತಕಗಳಿಗೆ ಸಂಬಂಧಿಸಿದಂತೆ ನಲಿ ಕಲಿ, ಕಲಿ ನಲಿ (ಸವಿಕನ್ನಡ) ಪುಸ್ತಕಗಳು ಸರ್ಕಾರಿ ಶಾಲೆಗಳಿಗೆ ಅನ್ವಯಿಸಲಿದೆ. 5ನೇ ತರಗತಿಯಿಂದ ಕನ್ನಡ ಪ್ರಥಮ ಹಾಗೂ ದ್ವಿತೀಯ ಭಾಷೆ ಪಠ್ಯಪುಸ್ತಕವಾಗಿ 10ನೇ ತರಗತಿಯವರೆಗೂ ಬೋಧಿಸಬೇಕಿದೆ.

ಇನ್ನು, ಹೊರ ರಾಜ್ಯಗಳಿಂದ ವಲಸೆ ಬಂದು 2ರಿಂದ 8ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಮೊದಲ ವರ್ಷ ಒಂದನೇ ತರಗತಿಗೆ ನಿಗದಿಪಡಿಸಿದ ಕನ್ನಡ ಭಾಷಾ ಪಠ್ಯಕ್ರಮ ಬೋಧಿಸಬೇಕು. ಎರಡು ಮತ್ತು ಆನಂತರದ ವರ್ಷಗಳಲ್ಲಿ ಎರಡನೇ ತರಗತಿ ಹಾಗೂ ಅನುಕ್ರಮವಾಗಿ ಮೇಲಿನ ತರಗತಿಗಳ ಪಠ್ಯಕ್ರಮಗಳನ್ನು ಬೋಧಿಸಲು ಸೂಚಿಸಲಾಗಿದೆ. ಒಂಬತ್ತು ಮತ್ತು 10ನೇ ತರಗತಿಗೆ ಸೇರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನಿಗದಿಪಡಿಸಲು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಲಾಗಿದೆ.

ಕನ್ನಡ ಭಾಷಾ ಅನುಷ್ಠಾನ ಬಗ್ಗೆ ಪರಿಶೀಲಿಸಲು ಪ್ರತಿಯೊಂದು ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ), ನಿರ್ದೇಶಕರು (ಪ್ರೌಢಶಿಕ್ಷಣ), ಆಯಾ ವಿಭಾಗದ ನಿರ್ದೇಶಕರು ಸಕ್ಷಮ ಪ್ರಾಧಿಕಾರ ನೇಮಕ ಮಾಡಬೇಕು. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಚಾಲ್ತಿಯಲ್ಲಿರುವ ಎಲ್ಲ ಜಿಲ್ಲೆಗಳನ್ನು ಗುರುತಿಸಬೇಕು. ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಸುತ್ತೋಲೆ ಹೊರಡಿಸಬೇಕು. ಬಿಇಒ ಅವರಿಂದ ಶಾಲಾವಾರು ಮಾಹಿತಿ ಕ್ರೋಡೀಕರಿಸಬೇಕು. ಅನುಷ್ಠಾನ ಮಾಡದ ಶಾಲೆಗಳ ವಿರುದ್ಧ ನೋಟಿಸ್ ಜಾರಿ ಮಾಡಬೇಕು. ಆನಂತರ ದಂಡವಿಧಿಸಬೇಕು ಎಂದು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.

ಒಂದು ವೇಳೆ ಕನ್ನಡ ಭಾಷಾ ಕಲಿಕೆ ಅನಿಯಮ-2015 ಉಲ್ಲಂಘಿಸಿದ ಆರೋಪ ಸಾಬೀತಾದರೆ ಕ್ರಮ ಜರುಗಿಸುವ ಅಕಾರವನ್ನೂ ಈ ಅಧಿಕಾರಿಗೆ ನೀಡಲಾಗಿದೆ. ಕರ್ನಾಟಕ ಶಿಕ್ಷಣ ಅನಿಯಮ-1983ರ ಅನಿಯಮ 128ನೇ ಪ್ರಕರಣದಲ್ಲಿ ತಿಳಿಸಿದಂತೆ ಈ ಶಾಲೆಗಳಿಗೆ ದಂಡ ವಿಸಲು ಅವಕಾಶವಿದೆ.

ಖಾಸಗಿ ಶಾಲೆಗಳ ವಿರೋಧ

ಕನ್ನಡ ಅನುಷ್ಠಾನ ಮಾಡುವುದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ. ಮಾತ್ರವಲ್ಲ ಇದನ್ನು ಕೋರ್ಟ್​ನಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.

ಕನ್ನಡ ಅನುಷ್ಠಾನ ಮಾಡುವುದು ಸರಿಯಷ್ಟೇ. ಆದರೆ ಸಿಬಿಎಸ್​ಇ ಶಾಲೆಗಳಿಗೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಿದೆ. ಇದೀಗ ರಾಜ್ಯ ಸರ್ಕಾರ ಕನ್ನಡ ಎನ್ನುತ್ತಿದೆ. ಕೋರ್ಟ್​ನಲ್ಲಿ ಯಾರಾದರೂ ಪಾಲಕರು ಇದನ್ನು ಪ್ರಶ್ನಿಸಿದರೆ, ವ್ಯಾಜ್ಯಯುಂಟಾಗಿ ಕನ್ನಡ ಕಲಿಕೆಗೆ ಕುತ್ತು ಬರಲಿದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಿ. ಶಶಿಕುಮಾರ್ ತಿಳಿಸಿದ್ದಾರೆ.

English summary
Karnataka State Government mandates teaching Kannada as the first or secondary language in the medium of one to tenth.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia