ವಿದ್ಯಾರ್ಥಿಗಳನ್ನು ನಕ್ಷತ್ರದಂಗಳಕ್ಕೆ ಕರೆದೊಯ್ಯಲಿದೆ 'ಶಾಲಾ ಅಂಗಳಕ್ಕೆ ತಾರಾಲಯ' ಯೋಜನೆ

Posted By:

ಖಗೋಳ ವಿಜ್ಞಾನ, ಬ್ರಹ್ಮಾಂಡ, ನಕ್ಷತ್ರ ಪುಂಜ ಎಂದೆಲ್ಲ ಕುತೂಹಲದಿಂದ ಕೇಳಿದ್ದ ಮಕ್ಕಳು ಇನ್ನು ಮುಂದೆ ತಾರಾಲಯದ ಮೂಲಕ ಹತ್ತಿರದಿಂದ ನೋಡಬಹುದಾಗಿದೆ.

ರಾಜ್ಯ ಸರ್ಕಾರ ಆರಂಭಿಸುತ್ತಿರುವ 'ಶಾಲಾ ಅಂಗಳಕ್ಕೆ ತಾರಾಲಯ' ವಿಶೇಷವಾಗಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಬಾಹ್ಯಾಕಾಶ ಕೌತುಕವನ್ನು ತಣಿಸಲಿದೆ.

ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ವಿಸ್ಮಯಗಳ ಬಗ್ಗೆ ಅರಿವು ಮೂಡಿಸುವ ಸಂಚಾರಿ ಡಿಜಿಟಲ್‌ ತಾರಾಲಯಗಳಿಗೆ ಇದೇ 23 ಕ್ಕೆ ಚಾಲನೆ ನೀಡಲಾಗುತ್ತಿದ್ದು, ಒಟ್ಟು ಐದು ಸಂಚಾರಿ ತಾರಾಲಯಗಳು ರಾಜ್ಯದ ವಿವಿಧೆಡೆ ಸಂಚರಿಸಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ರಸದೌತಣ ಬಡಿಸಲಿವೆ.

ಶಾಲಾ ಅಂಗಳಕ್ಕೆ ತಾರಾಲಯ

ಈ ಯೋಜನೆಯ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತಾರಾಂ ಅವರು ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿ, ಅತ್ಯಾಧುನಿಕ ಪ್ರೊಜೆಕ್ಟರ್‌ ನೆರವಿನಿಂದ ವಿಶೇಷ ಗೊಮ್ಮಟದಲ್ಲಿ ಕಾಲ್ಪನಿಕ ಆಕಾಶ ಸೃಷ್ಟಿಸಿ, ವಿದ್ಯಾರ್ಥಿಗಳಿಗೆ ಮನೋರಂಜನೆ ಮೂಲಕ ಖಗೋಳ ವಿಜ್ಞಾನ ಮತ್ತು ಇತರೆ ವೈಜ್ಞಾನಿಕ ವಿಷಯವನ್ನು ತಿಳಿಸಲಾಗುತ್ತದೆ. ಬ್ರಹ್ಮಾಂಡ, ಕ್ಷೀರಪಥ, ಆಕಾಶಗಂಗೆ ಕುರಿತಂತೆ ಅರ್ಧ ಗಂಟೆ ಕಾರ್ಯಕ್ರಮ ಇರುತ್ತದೆ. ಒಂದು ಪ್ರದರ್ಶನವನ್ನು ತಲಾ 40 ವಿದ್ಯಾರ್ಥಿಗಳು ಕುಳಿತು ವೀಕ್ಷಿಸಬಹುದು ಎಂದರು.

ಪ್ರತಿ ಸಂಚಾರಿ ತಾರಾಲಯಕ್ಕೆ ರೂ.1.20 ಕೋಟಿ ತಗುಲುತ್ತಿದ್ದು, ಒಟ್ಟು ಆರು ಕೋಟಿ ರೂಗಳ ವೆಚ್ಚದಲ್ಲಿ ತಾರಾಲಯಗಳನ್ನು ಸಿದ್ಧಪಡಿಸಲಾಗಿದೆ. ಇದೇ ಸೆಪ್ಟಂಬರ್‌ 4 ರಿಂದ ಇವು ರಾಜ್ಯದೆಲ್ಲೆಡೆ ಸಂಚರಿಸಲಿವೆ. ಬೆಳಗಾವಿ ವಿಭಾಗಕ್ಕೆ 2, ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿ ವಿಭಾಗಕ್ಕೆ ತಲಾ ಒಂದು ಸಂಚಾರಿ ತಾರಾಲಯ ನಿಯೋಜಿಸಲಾಗುವುದು.

ಇದನ್ನು ಗಮನಿಸಿ: ಮಧ್ಯಪ್ರದೇಶದಲ್ಲಿ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಲಿದೆ

ಪ್ರಾಯೋಗಿಕ ಪ್ರದರ್ಶನದ ಯಶಸ್ಸು

ಸಂಚಾರಿ ತಾರಾಲಯ ಯೋಜನೆಯನ್ನು ಆರಂಭಿಸುವ ಮೊದಲು ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ (ಚಿಕ್ಕಬಳ್ಳಾಪುರ, ಗೌರಿ ಬಿದನೂರು ಮತ್ತು ಬಾಗೇಪಲ್ಲಿ) ಪ್ರಾಯೋಗಿಕವಾಗಿ ಎರಡು ತಿಂಗಳು 33 ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪ್ರದರ್ಶನ ನೀಡಿತ್ತು. ಈ ಅವಧಿಯಲ್ಲಿ 10,500 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿಷಯ ತಜ್ಞರು ಈ ಯೋಜನೆಯ ಪ್ರಯೋಜನ ಪಡೆದಿದ್ದರು.

ಎಂಟರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ಕೆ ಅನುಗುಣವಾಗಿ ನೋಡಿ ತಿಳಿ ಪರಿಕಲ್ಪನೆಯಡಿ ಪ್ರದರ್ಶನಗಳನ್ನು ರೂಪಿಸಲಾಗಿದೆ. ಮುಂದಿನ ಹಂತದಲ್ಲಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವೀಕ್ಷಣೆಗೂ ಅವಕಾಶ ನೀಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತಾರಾಂ ಹೇಳಿದರು.

ಮಿನಿ ತಾರಾಲಯಗಳು

₹ 40 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ, ಗದಗ, ಮಡಿಕೇರಿ, ಬಾಗಲಕೋಟೆ, ವಿಜಯಪುರದಲ್ಲಿ ಮಿನಿ ತಾರಾಲಯಗಳ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

English summary
Science and technology minister MR Seetharam on Monday said the state government has purchased five mobile planetariums to educate high school children about astronomy in the state's hinterlands.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia