ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ ಫುಲ್ ಖುಷ್

Posted By:

ದ್ವಿತೀಯ ಪಿಯುಸಿ ಪರೀಕ್ಷೆ ಇಂದು ರಾಜ್ಯಾದ್ಯಂತ ಆರಂಭವಾಗಿದೆ. ಮೊದಲ ದಿನ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆದವು.

ತುಂಬಾ ವ್ಯವಸ್ಥಿತವಾಗಿ ಪರೀಕ್ಷೆ ಆರಂಭವಾಗಿರುವುದು ಎಲ್ಲರಿಗೂ ಖುಷಿ ನೀಡಿದೆ. ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಯಾವುದೇ ರೀತಿಯ ಗೊಂದಲ ಉಂಟಾಗದೇ ಸಮಾಧಾನಕರವಾಗಿ ಪರೀಕ್ಷೆ ನಡೆದಿದೆ. ಜಯನಗರದ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಒಟ್ಟು 238 ವಿದ್ಯಾರ್ಥಿಗಳು ಜೀವಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದಾರೆ.

ಸೂಕ್ತ ಭದ್ರತೆ

ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಚುನಾವಣೆ ಮಾದರಿಯಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡದಂತೆ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗೂ ಸಿಸಿಟಿವಿ ಅಳವಡಿಸಲಾಗಿದ್ದು, ಮೊದಲ ದಿನದ ಪರೀಕ್ಷೆಯು ಯಶಸ್ವಿಯಾಗಿ ನಡೆದಿದೆ.

ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗಲಿಲ್ಲ

ಅನೇಕ ವಿದ್ಯಾರ್ಥಿಗಳ ಪ್ರಕಾರ ಮೊದಲ ದಿನದ ಪತ್ರಿಕೆಗಳಾದ ಜೀವಶಾಸ್ತ್ರ ಮತ್ತು ಇತಿಹಾಸದ ವಿಷಯಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಉತ್ತರಿಸುವಂತಿದ್ದವು. ಬಹುಪಾಲು ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಮುಗಿಸಿದ್ದಾರೆ.

ಮೊದಲ ದಿನ ಫುಲ್ ಖುಷ್

"ನಾವು ಏನೋ ನಿರೀಕ್ಷಿಸಿದ್ದೆವೋ ಅದೇ ರೀತಿ ಸುಲಭವಾಗಿ ಪ್ರಶ್ನೆಗಳನ್ನು ಕೇಳಲಾಗಿದೆ. ಮನೆಯವರ ಸಹಕಾರ ಮತ್ತು ಕಾಲೇಜಿನಲ್ಲಿ ಶಿಕ್ಷಕರ ಸಹಕಾರದಿಂದ ಇಂದು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದಿದ್ದೇವೆ. ಪರೀಕ್ಷೆಗೆ ಬರುವುದಕ್ಕೂ ಮುಂಚೆ ಒತ್ತಡವಿತ್ತಾದರೂ ಮಾನಸಿಕವಾಗಿ ತಯಾರಿ ಮಾಡಿಕೊಂಡಿದ್ದೆವು. ಬಹಳಷ್ಟು ಜನ ದ್ವಿತೀಯ ಪಿಯು ಪರೀಕ್ಷೆ ಎಂದರೆ ತುಂಬಾ ಕಷ್ಟ ಎಂದೆಲ್ಲ ಹೇಳಿದ್ದರು, ಆದರೆ ನಿರಾಯಸವಾಗಿ ಪರೀಕ್ಷೆ ಮುಗಿಸಿದ್ದೇವೆ. ಮುಂದಿನ ಪರೀಕ್ಷೆಗಳು ಕೂಡ ಇದೇ ರೀತಿ ಇದ್ದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು" ಎನ್ನುವುದು ಜೈನ್ ಕಾಲೇಜು ವಿದ್ಯಾರ್ಥಿ ರಂಜಿತ್ ಮಾತು.

ಪರೀಕ್ಷಾ ಮೇಲ್ವಿಚಾರಕರಾಗಿ ಭಾಗವಹಿಸಿದ್ದ ಎನ್ ಎಂ ಕೆ ಆರ್ ವಿ ಕಾಲೇಜಿನ ಕನ್ನಡ ಉಪನ್ಯಾಸಕರು ಹೇಳುವಂತೆ "ವಿದ್ಯಾರ್ಥಿಗಳು ಯಾವುದೇ ಆತಂಕ, ಒತ್ತಡವಿಲ್ಲದೆ ಬಹಳ ಖುಷಿಯಿಂದ ಇಂದಿನ ಪರೀಕ್ಷೆ ಬರೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚೆಯೇ ಪರೀಕ್ಷಾ ಕೇಂದ್ರದ ಬಳಿ ಹಾಜರಿದ್ದರು. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿಟಿವಿ ಅಳವಡಿಸಿರುವ ಕಾರಣ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಅಕ್ರಮಕ್ಕೆ ಪ್ರಯತ್ನಿಸಿಲ್ಲ. ಶಾಂತಿಯುತವಾಗಿ ಪರೀಕ್ಷೆ ನಡೆದಿದೆ."

ಮೊದಲ ದಿನ ಫುಲ್ ಖುಷ್

ಎನ್ ಎಂ ಕೆ ಆರ್ ವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ಬಿ ಪ್ರಭಾವತಿ ಮಾತನಾಡಿ " ಇಂದು ಜೀವಶಾಸ್ತ್ರ ಮತ್ತು ಇತಿಹಾಸದ ಪರೀಕ್ಷೆಗಳು ನಡೆದಿದ್ದು, ಸೂಕ್ತ ಸಮಯಕ್ಕೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಕೆಂದ್ರದಲ್ಲಿ ಹಾಜರಿದ್ದರು. ಪರೀಕ್ಷೆಗೆ ವಿಳಂಭವಾಗಿ ಬರುವುದು, ಪ್ರವೇಶ ಪತ್ರ ಮರೆತು ಬರುವುದು, ನಕಲು ಮಾಡುವುದು ಇಂತಹ ಯಾವುದೇ ಸಮಸ್ಯೆಯು ನಮ್ಮ ಕಾಲೇಜಿನಲ್ಲಿ ಕಂಡು ಬಂದಿಲ್ಲ. ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆಯು ತುಂಬಾ ವ್ಯವಸ್ಥಿತವಾಗಿ ನಡೆದಿದೆ, ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದ ಪರೀಕ್ಷೆಯನ್ನು ಬರೆದಿದ್ದಾರೆ" ಎಂದು ಹೇಳಿದರು.

ಜೀವಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಒಟ್ಟು ಎಪತ್ತು ಅಂಕಗಳ ಜೀವಶಾಸ್ತ್ರದ ಪತ್ರಿಕೆಯು ಎ,ಬಿ,ಸಿ ಮತ್ತು ಡಿ ಎಂಬ ನಾಲ್ಕು ಭಾಗಗಳನ್ನು ಒಳಗೊಂಡಿದೆ.
ಭಾಗ-ಎ
ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
ಭಾಗ-ಬಿ
ಇಲ್ಲಿ ಒಟ್ಟು 8 (ಎಂಟು) ಪ್ರಶ್ನೆಗಳು ಇದ್ದು ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ 3 ರಿಂದ 5 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.
ಭಾಗ-ಸಿ
ಬಿ ಭಾಗದಂತೆ ಸಿ ಭಾಗವು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಐದು ಪ್ರಶ್ನೆಗಳಿಗೆ 40 ರಿಂದ 80 ಪದಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಮೂರು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ. ಈ ವಿಭಾಗದಲ್ಲಿ ಹದಿನೈದು ಅಂಕಗಳಿರುತ್ತದೆ.
ಭಾಗ-ಡಿ
ಡಿ ಭಾಗವನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ವಿದ್ಯಾರ್ಥಿಯು ಕೇಳಲಾದ ಆರು ಪ್ರಶ್ನೆಗಳಲ್ಲಿ ಯಾವುದಾದರು ನಾಲ್ಕಕ್ಕೆ 200 ರಿಂದ 250 ಪದಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಉತ್ತರಕ್ಕೆ ಐದು ಅಂಕಗಳಿದ್ದು, ಈ ವಿಭಾಗವು 20 ಅಂಕಗಳದ್ದಾಗಿರುತ್ತದೆ.
ಎರಡನೇ ವಿಭಾಗವು 15 ಅಂಕಗಳದಾಗಿದ್ದು ಒಟ್ಟು ಐದು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಯು ಯಾವುದಾದರು ಮೂರು ಪ್ರಶ್ನೆಗಳಿಗೆ 200 ರಿಂದ 250 ಪದಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಉತ್ತರಕ್ಕೆ ಐದು ಅಂಕಗಳಿರುತ್ತವೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಹೊರಗುಳಿದ 4204 ವಿದ್ಯಾರ್ಥಿಗಳು

English summary
The first exam of Karnatka II PUC seemed to be a good kick start for the candidates who appeared as most of them termed it to be an easy paper.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia