ಪಿಯುಸಿ ಪರೀಕ್ಷೆ: ಮೊದಲ ದಿನ ಎಲ್ಲೆಲ್ಲಿ ಏನೇನು?

Posted By:

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆದಿದ್ದು ಎಲ್ಲರಿಗು ಶಿಕ್ಷಣ ಇಲಾಖೆಗೆ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಖುಷಿ ನೀಡಿದೆ. ರಾಜ್ಯಾದ್ಯಂತ ಯಾವುದೇ ರೀತಿಯ ಗೊಂದಲ ಉಂಟಾಗದೇ ಸಮಾಧಾನಕರವಾಗಿ ಪರೀಕ್ಷೆ ನಡೆದಿದೆ.

ದ್ವಿತೀಯ ಪಿಯುಸಿ ಮೊದಲ ದಿನದ ಪರೀಕ್ಷೆ ಯಾವುದೇ ಗೊಂದಲ ಇಲ್ಲದೆ ಸುಸೂತ್ರವಾಗಿ ನಡೆದಿದೆ. ಏನೇ ಆದರೂ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಲೋಪ ದೋಷಗಳು ಕಾಣಿಸಿವೆ. ಎಲ್ಲೆಲ್ಲಿ ಏನೇನು ಆಗಿದೆ ಅನ್ನೊದಿಕ್ಕೆ ಇಲ್ಲಿದೆ ಮಾಹಿತಿ.

ಪಿಯುಸಿ ಪರೀಕ್ಷೆ ಮೊದಲ ದಿನ

ಐವರು ಡಿಬಾರ್

ಎಂದಿನಂತೆ ಈ ವರ್ಷವು ಮೊದಲ ದಿನದ ಪರೀಕ್ಷೆಯಲ್ಲಿ ರಾಜ್ಯದ ಕೆಲವೆಡೆ ವಿದ್ಯಾರ್ಥಿಗಳು ಡಿಬಾರ್ ಆಗಿದ್ದರೆ. ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಪರೀಕ್ಷಾ ಅಕ್ರಮಗಳ ಕಾರಣಕ್ಕೆ ಐವರು ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ.

ಡಿಬಾರ್ ಎಲ್ಲೆಲ್ಲಿ ?
ದಾವಣಗೆರೆ, ಕಲಬುರ್ಗಿಯಲ್ಲಿ ಒಟ್ಟು ಐದು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಮೊದಲ ದಿನ ನಡೆದ ಇತಿಹಾಸ ಮತ್ತು ಜೀವಶಾಸ್ತ್ರದ ವಿಷಯಗಳ ಪರೀಕ್ಷೆಯಲ್ಲಿ ದಾವಣಗೆರೆಯಲ್ಲಿ ಇಬ್ಬರು ಮತ್ತು ಕಲಬುರ್ಗಿಯಲ್ಲಿ ಮೂವರು ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬುಕ್ಲೆಟ್ ಜೊತೆಗೆ ಎಸ್ಕೇಪ್!
ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆ ಸಹಿತ ಓಡಿ ಹೋಗಿರುವ ಘಟನೆ ನಡೆದಿದೆ. ಇತಿಹಾಸ ವಿಷಯ ಬರೆದ ತಾಲೂಕಿನ ಶಿಂಗ್ರಿಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪುನರಾವರ್ತಿತ (ರಿಪೀಟರ್) ವಿದ್ಯಾರ್ಥಿ ಬಿ. ಸುಹೀಲ್ ಉತ್ತರ ಪತ್ರಿಕೆ ಜತೆ ಪರಾರಿಯಾಗಿದ್ದಾನೆ. ಮೇಲ್ವಿಚಾರಕರು ಪತ್ರಿಕೆ ವಿತರಿಸಿ ಸಹಿ ಹಾಕುತ್ತಿದ್ದಾಗ ಈತ ಪತ್ರಿಕೆ ಸಹಿತ ಹೊರಗೋಡಿ 5 ಅಡಿಯ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದಾನೆ. ವಿದ್ಯಾರ್ಥಿಯನ್ನು ಡಿಬಾರ್ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ವಿದ್ಯಾರ್ಥಿ ಅಸ್ವಸ್ಥ
ಮೈಸೂರಿನ ವಿಜಯವಿಠಲ ಕಾಲೇಜಿನಲ್ಲಿ ಜೀವವಿಜ್ಞಾನ ಪರೀಕ್ಷೆ ಬರೆಯುತ್ತಿದ್ದ ಪ್ರೀತಂ ಎಂಬ ವಿದ್ಯಾರ್ಥಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷೆ ಶುರುವಾದ ಒಂದೂವರೆ ಗಂಟೆ ನಂತರ ಈ ಘಟನೆ ನಡೆದಿದೆ. ಪರೀಕ್ಷೆ ಬರೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಈ ವಿದ್ಯಾರ್ಥಿಯನ್ನು ತಕ್ಷಣವೇ ಆಂಬುಲೆನ್ಸ್ ನಲ್ಲಿ ಆಸ್ಪತ್ರಗೆ ಒಯ್ಯಲಾಗಿದೆ.

ವಿದ್ಯಾರ್ಥಿಗಳ ಪರದಾಟ

ಪರೀಕ್ಷೆಯಲ್ಲಿ ಕಾರ್ಡ್ ಬೋರ್ಡ್ ಬಳಸುವ ವಿಚಾರವಾಗಿ ಗೊಂದಲ ಉಂಟಾಗಿತ್ತು. ಚಿತ್ರದುರ್ಗದ ಹೊಸದುರ್ಗ ಜೂನಿಯರ್ ಕಾಲೇಜಿ ನಲ್ಲಿ ಕಾರ್ಡ್​ಬೋರ್ಡ್ ಬಳಕೆಗೆ ನಿರಾಕರಿಸಿದ್ದರಿಂದ ವಿದ್ಯಾರ್ಥಿಗಳು ಪರದಾಡಿದರು.

ವಿದ್ಯಾರ್ಥಿನಿಯರ ಆತಂಕ
ಮಂಡ್ಯದ ಕೆ.ಆರ್.ಪೇಟೆಯ ಸರ್ಕಾರಿ ಬಾಲಕಿಯರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಐವರು ವಿದ್ಯಾರ್ಥಿನಿಯರ ಪ್ರವೇಶ ಪತ್ರದಲ್ಲಿ ಪ್ರಾಂಶುಪಾಲರ ಸಹಿ ಇಲ್ಲದೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಕೊಠಡಿಗಳಿಗೆ ಅಲೆದಾಟ
ಹಾಸನದ ಹೊಳೆನರಸೀಪುರದಲ್ಲಿ ಪರೀಕ್ಷಾ ಕೊಠಡಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಸಿಗದೆ ಕೆಲ ಕಾಲ ಆತಂಕದಿಂದ ಅಲೆಯುವ ಪರಿಸ್ಥಿತಿ ಉಂಟಾಗಿತ್ತು.

ಶಾಲೆಯಲ್ಲೇ ಉಳಿಯುವ ಶಿಕ್ಷಕರು!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಸಾಧನೆಗಾಗಿ ಜಿಲ್ಲೆಯ ಮೂಡಲಗಿ ಮತ್ತು ಗೋಕಾಕ ಶೈಕ್ಷಣಿಕ ವಲಯದ ಶಿಕ್ಷಕರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಠ ಮಾಡಲು ಶಾಲೆಗಳಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ.

ತೆರೆದಿದ್ದ ಜೆರಾಕ್ಸ್ ಅಂಗಡಿ
ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಿತ ಪ್ರದೇಶವೆಂದು ಘೋಷಿಸಿ, ಝೆರಾಕ್ಸ್‌ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಆದರೂ ಬೆಂಗಳೂರಿನ ಕೆಲವೆಡೆ ಝೆರಾಕ್ಸ್‌ ಅಂಗಡಿಗಳು ಎಂದಿನಂತೆ ಬಾಗಿಲು ತೆಗೆದಿದ್ದವು. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬಾಗಿಲು ಹಾಕಿಸಿದ್ದಾರೆ.

ಇದನ್ನು ಗಮನಸಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ ಫುಲ್ ಖುಷ್

English summary
Five students were debarred on charges of malpractice during the second pre-university examination on Monday.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia