ಎಸ್ ಎಸ್ ಎಲ್ ಸಿ ಪರೀಕ್ಷೆಗೂ ಮುನ್ನ ಕರ್ನಾಟಕ ಪ್ರವಾಸ

Posted By:

ಎಸ್ ಎಸ್ ಎಲ್ ಸಿ ಪರೀಕ್ಷೆ ತಯಾರಿ ಭರ್ಜರಿಯಾಗಿ ಸಾಗಿದೆ, ಇದೇ ಹೊತ್ತಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗುತ್ತವೆ. ಇನ್ನಿರುವ ಕೆಲವೇ ಕೆಲವು ದಿನಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಅಂಕಗಳಿಸುವ ಪ್ರಯತ್ನದಲ್ಲಿದ್ದರೆ ಶಿಕ್ಷಣ ಇಲಾಖೆ ಕರ್ನಾಟಕ ಪ್ರವಾಸ ಕಡ್ಡಾಯಗೊಳಿಸಿ ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ.

ಪ್ರವಾಸದ ವಿವರ

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ರಾಜ್ಯದ ಪ್ರೌಢಶಾಲೆಗಳ ಮಕ್ಕಳಿಗೆ 'ಕರ್ನಾಟಕ ಪ್ರವಾಸ' ಏರ್ಪಡಿಸುತ್ತಾ ಬಂದಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ತಾಲ್ಲೂಕಿನ ಆಯಾ ಪ್ರೌಢಶಾಲೆಗಳಲ್ಲಿನ ಮಕ್ಕಳನ್ನು ಆಯ್ಕೆ ಮಾಡಿ ದಿನಾಂಕ ನಿಗದಿಪಡಿಸಿ ಪ್ರವಾಸಕ್ಕೆ ಅವಕಾಶ ಒದಗಿಸಲಾಗುತ್ತದೆ. 'ಕರ್ನಾಟಕ ಪ್ರವಾಸ' ವನ್ನು ಡಿಸೆಂಬರ್‌ ತಿಂಗಳಿನಲ್ಲಿಯೇ ಮುಗಿಸಬೇಕು ಎಂಬ ನಿಯಮವೂ ಇದೆ. ಆದರೆ, ಈ ಬಾರಿ ಸರ್ಕಾರದ ಅನುದಾನ ವಿಳಂಬವಾಗಿರುವುದರಿಂದ ಮಾರ್ಚ್‌ ತಿಂಗಳಿನಲ್ಲಿಯೇ 'ಕರ್ನಾಟಕ ಪ್ರವಾಸ' ಮಾಡುವಂತೆ ಅಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಆತಂಕ

ಶಿಕ್ಷಕರ ಮೇಲೆ ಕ್ರಮ

'ಕರ್ನಾಟಕ ಪ್ರವಾಸ'ವನ್ನು ತಪ್ಪಿಸಿದರೆ ಶಿಕ್ಷಕರನ್ನು ಹೊಣೆಗಾರ ರನ್ನಾಗಿಸಿ ಕ್ರಮ ಜರುಗಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿರುವುದರಿಂದ ಶಾಲಾ ಶಿಕ್ಷಕರು ಕೂಡ ಚಿಂತೆಗೀಡಾಗಿದ್ದಾರೆ.

'ಕರ್ನಾಟಕ ಪ್ರವಾಸ' ಯೋಜನೆಗೆ ಶೇ 90ರಷ್ಟು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತದೆ. 'ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ದೃಢೀಕರಿಸಲಾಗುತ್ತದೆ. ಹಾಗಾಗಿ, ಆಯ್ಕೆಗೊಂಡ ವಿದ್ಯಾರ್ಥಿಗಳು ಕಡ್ಡಾಯ ಪ್ರವಾಸ ಮಾಡಬೇಕಾಗುತ್ತದೆ. ಆಯ್ಕೆಗೊಂಡ ವಿದ್ಯಾರ್ಥಿಗಳು ಗೈರು ಹಾಜರಾದರೆ ಇತರೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಬರುವುದಿಲ್ಲ' ಹೀಗಾಗಿ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುವುದೊ ಬೇಡವೊ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಅನುದಾನ ವಿಳಂಬವೇ ಕಾರಣ

ಪ್ರವಾಸೋದ್ಯಮ ಇಲಾಖೆ ವಿದ್ಯಾರ್ಥಿಗಳ ಕರ್ನಾಟಕ ಪ್ರವಾಸಕ್ಕೆ ಅನುದಾನವನ್ನು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಜನವರಿ ತಿಂಗಳ ಅಂತ್ಯದಲ್ಲಿ ಅನುದಾನ ಜಿಲ್ಲಾ ಪಂಚಾಯಿಗಳಿಗೆ ಬಂದಿದೆ. ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಯಿಂದ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ಪಡೆದು ಖಜಾನೆಯಿಂದ ಹಣ ಶಿಕ್ಷಣ ಇಲಾಖೆ ಕೈಸೇರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲಿ ಖರ್ಚು ಮಾಡಬೇಕೆಂಬ ನಿಯಮ ಇದೆ. ಹಳೆಯ ಅನುದಾನವನ್ನು ಮುಂದಿನ ಆರ್ಥಿಕ ವರ್ಷಕ್ಕೆ ಮುಂದುವರಿಸಲು ಬರುವುದಿಲ್ಲ. ಹಾಗಾಗಿ, ಪ್ರವಾಸ ಅನಿವಾರ್ಯವಾಗಿದೆ.

ಪೋಷಕರ ಮಾತು

ಕರ್ನಾಟಕ ಪ್ರವಾಸ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಕೂಡ ಆತಂಕಕ್ಕೊಳಗಾಗಿದ್ದಾರೆ. ಪರೀಕ್ಷೆಯ ಅಂತಿಮ ತಯಾರಿಯಲ್ಲಿರುವ ಮಕ್ಕಳ ಭವಿಷ್ಯಕ್ಕೆ ಇದು ಮಾರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳು ಓದಿನಲ್ಲಿ ಮಗ್ನರಾಗಿರುತ್ತಾರೆ ಪ್ರವಾಸಕ್ಕೆ ಹೋದರೆ ಅವರ ಏಕಾಗ್ರತೆಗೆ ತೊಂದರೆಯಾಗಲಿದ್ದು, ಇದು ಅವರ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎನ್ನುತ್ತಾರೆ.

ಇದನ್ನು ಗಮನಿಸಿ :ಎಸ್ ಎಸ್ ಎಲ್ ಸಿ ಪರೀಕ್ಷೆ : ಮಾದರಿ ಉತ್ತರ ಪತ್ರಿಕೆಗಳು ಲಭ್ಯ

                2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳಾಪಟ್ಟಿ

English summary
mandated karnataka pravasa before the examination for sslc students leads to anxiety all over

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia