ಭಾಷೆ ಮತ್ತು ಶಿಕ್ಷಣದ ಬಗ್ಗೆ ಕುವೆಂಪು ಮಾತು

Posted By:

ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಮಾತೃ ಭಾಷೆ ಬಗ್ಗೆ ಸದಾ ಹೇಳುತ್ತಿದ್ದರು, ಅವರ ಅನೇಕ ಕೃತಿಗಳಲ್ಲಿ ಕನ್ನಡ ನಾಡು, ನುಡಿಯ ವರ್ಣನೆಯನ್ನು ಗಮನಿಸಿದರೆ ಸಾಕು ಅವರಲ್ಲಿನ ಭಾಷಾ ಪ್ರೇಮ ತಿಳಿಯುತ್ತದೆ.

ಕನ್ನಡದಲ್ಲಿ ಶಿಕ್ಷಣ ನೀಡುವ ಬಗ್ಗೆ ಮತ್ತು ಮಾತೃ ಭಾಷೆಯ ಮಹತ್ವದ ಬಗ್ಗೆ ಅವರು ಎಲ್ಲೆಡೆ ಹೇಳಿದ್ದಾರೆ.

ಕುವೆಂಪು ಎಂದರೆ ಗೂಗಲ್ ಕೂಡ ತಲೆಬಾಗುತ್ತದೆ

ಮಾತೃ ಭಾಷೆ ಬಗ್ಗೆ ಕುವೆಂಪು ಮಾತು (ಮನುಜಮತ ವಿಶ್ವಪಥ ದಿಂದ)

  • ನಮ್ಮ ಭಾಷೆ ವಿದ್ಯಾಭ್ಯಾಸದ ಅತ್ಯುನ್ನತ ಮಟ್ಟಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಲು ಸಮರ್ಥವಾಗಿದೆ ಎನ್ನುವುದರ ಬಗೆಗೆ ಯಾರೂ ಸಂದೇಹ ಪಡಬೇಕಾಗಿಲ್ಲ. ಮಾತೃಭಾಷೆಯ ಮೂಲಕವಾಗಿ ನಡೆಯುವ ಶಿಕ್ಷಣವೇ ಸರ್ವೋತ್ಕೃಷ್ಟವಾದುದೆಂಬುದು ಎಂದೂ ಚರ್ಚೆಯ ವಿಷಯವಲ್ಲ.
  • ಇಂಗ್ಲಿಷ್ ಭಾಷೆ ಬಲತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ.

ಕುವೆಂಪು ಮಾತು

  • ಮಾತೃಭಾಷೆಯ ಮೂಲಕವಾಗಿ ನಡೆಯುವ ಶಿಕ್ಷಣವೇ ಸರ್ವೋತ್ಕೃಷ್ಟವಾದುದೆಂಬುದು ಎಂದೂ ಚರ್ಚೆಯ ವಿಷಯವಲ್ಲ ಕಲಿಕೆಯ ಭಾಷೆಯಾಗಿ ಇಂಗ್ಲೀಷ್ ಬಲಾತ್ಕಾರದ್ದಾಗಿ ಉಳಿಯುವುದು ಬೇಡ. ಬೇಕೆಂದರೆ ನೂರಕ್ಕೆ ನೂರು ಜನರೂ ಅದನ್ನೆ ಆರಿಸಿಕೊಳ್ಳಲಿ, ಬೇಡವಾದರೆ ಒಬ್ಬನಿಗಾದರೂ ಅದನ್ನು ಬಿಡುವ ಅವಕಾಶವಿರಲಿ.
  • ಪ್ರಾದೇಶಿಕ ಭಾಷೆಗೆ ಅಗ್ರಸ್ಥಾನ ಕೊಡಬೇಕು, ಅದೇ ಶಿಕ್ಷಣ ಮಾಧ್ಯಮವಾಗಬೇಕು, ಅದೇ ರಾಜ್ಯಭಾಷೆಯಾಗಬೇಕು. (ಅಣ್ಣನ ನೆನಪು, ಪುಟ ೧೩೦)

ಕನ್ನಡ ಮಾಧ್ಯಮ ಸಂಪೂರ್ಣವಾಗಿ ಯಶಸ್ವಿಯಾಗಿ ಪ್ರತಿಷ್ಠಾಪಿತವಾಗುವತನಕ ಕನ್ನಡಿಗರಿಗೆ ಉದ್ಧಾರವಿಲ್ಲ, ಮೋಕ್ಷವಿಲ್ಲ. ಇಂಗ್ಲೀಷಿನ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಲ್ಲದೆ ಮತ್ತೇನೂ ಆಗಲಾರದು.
- ವಿಚಾರ ಕ್ರಾಂತಿಗೆ ಆಹ್ವಾನ

ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ.
- ಮನುಜ ಮತ ವಿಶ್ವ ಪಥ, ಪುಟ ೧

ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ಕುರಿತು ಇನ್ನು ಅನೇಕ ಗೊಂದಲಗಳು ಇವೆ. ಆದರೆ ಕುವೆಂಪು ಅವರು ಈ ಕುರಿತು ತಮ್ಮ ಸಾಹಿತ್ಯ ಭಾಷೆಯಲ್ಲಿಯೇ ಅಂದು ಉತ್ತರಿಸಿದ್ದರು.

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣ ಶೂಲ.

ಅಲ್ಲದೆ ಭಾಷೆ ಹೇರಿಕೆ ಬಗ್ಗೆಯೂ ಅವರು ಎಂದು ಮನುಜ ಮತ ವಿಶ್ವ ಪಥ ದಲ್ಲಿ ಹೇಳಿದ್ದಾರೆ 'ನಾವು ಇಂಗ್ಲೀಷ್ ದ್ವೇಷಿಗಳೂ ಅಲ್ಲ, ಹಿಂದಿ ದ್ವೇಷಿಗಳೂ ಅಲ್ಲ. ಎಲ್ಲರೂ ಎಲ್ಲವನ್ನೂ ಕಲಿಯಬೇಕು ಅನ್ನುವ ಬಲವಂತ ಬೇಡ' ಮನುಜ ಮತ ವಿಶ್ವ ಪಥ ದಲ್ಲಿ ಹೇಳಿದ್ದಾರೆ. ಇನ್ನು ಮುಂದೆ ಹೋಗಿ 'ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ.' ಎಂದು ಹೇಳಿರುವುದನ್ನು ಇಂದಿನ ಶಿಕ್ಷಣ ವ್ಯವಸ್ಥೆಯೇ ಮರೆತಂತಿದೆ.

English summary
Kuvempu spearheaded the movement to make Kannada the medium for education, emphasizing the theme "Education in the Mother tongue".

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia