ಒಳ ಉಡುಪು ತೆಗೆದು ನೀಟ್ ಪರೀಕ್ಷೆ ಬರೆದ ಯುವತಿ

Posted By:

ಭಾನುವಾರ ದೇಶದಾದ್ಯಂತ ಮೊದಲ ಬಾರಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿಷಯಗಳಿಗೆ ನಡೆದ ನೀಟ್ ಪರೀಕ್ಷೆ ಯಶಸ್ವಿಯಾಗಿದೆ. ಆದರೆ ಈ ಸಂದರ್ಭ ನಡೆದ ಕೆಲವು ಘಟನೆಗಳು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿಯ ನೀಟ್ ನ ಕೆಲವು ನಿಯಮಗಳು ಟೀಕೆಗೆ ಗುರಿಯಾಗಿದ್ದು ಈ ಸಂಬಂಧ ದೂರು ನೀಡುವುದಾಗಿ ಹಲವರು ಗುಡುಗಿದ್ದಾರೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಕೈಗೊಂಡ ಈ ನಿಯಮಗಳು ಹಲವು ಮುಜುಗರದ ಸನ್ನಿವೇಶವನ್ನೂ ತಂದೊಡ್ಡಿದ್ದು ವರದಿಯಾಗಿದೆ.

ಡ್ರೆಸ್ ಕೋಡ್ ಪಜೀತಿ

ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಹಾಗೂ ಸಮಯದ ವಿಚಾರದಲ್ಲಿ ಈ ಬಾರಿ ಕಠಿಣ ನಿಲುವು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಹಲವು ಗೊಂದಲಗಳು ನಿರ್ಮಾಣವಾದ ವರದಿಗಳು ದೇಶಾದ್ಯಂತ ಕೇಳಿ ಬಂದಿವೆ.

ನೀಟ್ ಡ್ರೆಸ್ ಕೋಡ್ ಪಜೀತಿ

ತುಂಬು ತೋಳಿನ ಅಂಗಿ ಹಾಗೂ ಗಾಢ ಬಣ್ಣದ ಪ್ಯಾಂಟುಗಳನ್ನು ಹಾಕದಂತೆ ನಿರ್ಬಂಧ ವಿಧಿಸಲಾಗಿತ್ತು. ಶೂ, ಹೈ ಹೀಲ್ಡ್ ಚಪ್ಪಲಿಗಳು, ಲೋಹದ ಬಟನ್ ಗಳು, ಲೋಹದ ಕಿವಿಯೋಲೆಗಳು, ದೊಡ್ಡ ಹೇರ್ ಪಿನ್ ಗಳಿಗೆಲ್ಲಾ ಪರೀಕ್ಷಾ ಕೊಠಡಿಯೊಳಗೆ ನಿಷೇಧ ಹೇರಲಾಗಿತ್ತು. ಎಲ್ಲಿಯವರೆಗೆ ಅಂದರೆ ಒಳ ಉಡುಪಿನಲ್ಲಿರುವ ಲೋಹದ ಬಟನ್, ಬ್ರಾ ಹುಕ್ ಗಳಲ್ಲಿರುವ ಲೋಹದ ಬಟನ್ ಗಳಿಗೂ ನಿಷೇಧ ಹೇರಲಾಗಿತ್ತು.

ಮುಜುಗರದ ಕೇರಳ ಘಟನೆ

ಕೇರಳದ ಕಣ್ಣೂರಿನಲ್ಲಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಯೋರ್ವಳ ಬ್ರಾ ತೆಗೆಯುವಂತೆ ಸೂಚಿಸಲಾಯಿತು. ಆಕೆಯ ಬ್ರಾ ಹುಕ್ ಲೋಹದ್ದಾದ್ದರಿಂದ ಅನಿವಾರ್ಯವಾಗಿ ಬ್ರಾ ಕಳಚಬೇಕಾಯಿತು. "ಪರೀಕ್ಷಾ ಕೇಂದ್ರದೊಳಕ್ಕೆ ಹೋದ ನನ್ನ ಮಗಳು ಸ್ವಲ್ಪ ಸಮಯದಲ್ಲೇ ಹಿಂದಕ್ಕೆ ಬಂದಳು. ಆಕೆಯ ಬ್ರಾವನ್ನು ನನ್ನ ಕೈಗಿಡಲು ಆಕೆ ಬಂದಿದ್ದಳು," ಎಂಬುದಾಗಿ ವಿದ್ಯಾರ್ಥಿನಿಯ ತಾಯಿ ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಇನ್ನೊಬ್ಬಾಕೆ ಯುವತಿಗೆ ಪ್ಯಾಂಟಿನ ಕಿಸೆ ಹರಿಯುವಂತೆ, ಪ್ಯಾಂಟಿನ ಬಟನ್ ತೆಗೆಯುವಂತೆ ಸೂಚಿಸಿದ್ದು ವರದಿಯಾಗಿದೆ. ಕೊನೆಗೆ ಅನಿವಾರ್ಯವಾಗಿ ಬ್ಲೇಡಿನಿಂದ ಪ್ಯಾಂಟಿನ ಕಿಸೆ ಕತ್ತರಿಸಿ, ಪ್ಯಾಂಟಿನ ಬಟನ್ ತೆಗೆಯಲಾಗಿತ್ತು. ನಂತರ ಆಕೆ ಪರೀಕ್ಷೆ ಮುಗಿಸಿ ಬರುವ ವೇಳೆಗೆ ಪೋಷಕರು ಮೂರು ಕಿಲೋಮೀಟರ್ ದೂರ ಹೋಗಿ ಆಕೆಗೆ ಹೊಸ ಬಟ್ಟೆ ಖರೀದಿಸಿ ತರಬೇಕಾಯಿತು.

ಇಷ್ಟೆಲ್ಲಾ ಬೆಳವಣಿಗೆಯ ನಂತರ ಯುವತಿಯರು ಧೈರ್ಯವಾಗಿ ಪರೀಕ್ಷೆ ಬರೆಯುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಂದು ಕೃಷ್ಣಾ, ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಬಟ್ಟೆ ವಸ್ತ್ರ ಸಂಹಿತೆಗೆ ಮ್ಯಾಚ್ ಆಗದ ಕಾರಣ ಟೀ ಶರ್ಟ್ ಧರಿಸಿ ಪರೀಕ್ಷೆ ಬರೆದರು. ಶೂ ಹಾಕಿದ ವಿದ್ಯಾರ್ಥಿಗಳನ್ನು ಶೂ ಕಳಚಿ ಪರೀಕ್ಷಾ ಕೇಂದ್ರದೊಳಕ್ಕೆ ಬಿಡಲಾಯಿತು. ಚೆನ್ನೈನಲ್ಲಿ ವಿದ್ಯಾರ್ಥಿಗಳು ತುಂಬು ತೋಳಿನ ಅಂಗಿ ಕತ್ತರಿಸಿಕೊಂಡರೆ, ಆಂಧ್ರದಲ್ಲಿ ಹೆಣ್ಣು ಮಕ್ಕಳ ತಲೆ ಕೂದನ್ನು ಫ್ರೀ ಬಿಡುವಂತೆ ಸೂಚಿಸಿದ್ದು ವರದಿಯಾಗಿದೆ.

ಇದನ್ನು ಗಮನಿಸಿ: ದೇಶಾದ್ಯಂತ ಕಟ್ಟುನಿಟ್ಟಿನ 'ನೀಟ್' ಯಶಸ್ವಿ

English summary
Many students who had appeared for NEET complained of being subjected to humiliation, all in the name of fair exams at various centres.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia