ದ್ವಿತೀಯ ಪಿಯುಸಿ ಪರೀಕ್ಷೆ : ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆದಿವೆ. ಕನ್ನಡ, ತಮಿಳು, ಮಲಯಾಳಂ ಮತ್ತು ಅರೇಬಿಕ್ ಭಾಷೆಗಳ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಮಾತೃಭಾಷೆಯನ್ನು ನಿರಾಯಾಸವಾಗಿ ಬರೆದಿದ್ದಾರೆ.

ಜಯನಗರದ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ 621 ವಿದ್ಯಾರ್ಥಿಗಳು ಉತ್ಸಾಹದಿಂದ ಕನ್ನಡ ಪರೀಕ್ಷೆ ಬರೆದಿದ್ದಾರೆ. ಸಾಮಾನ್ಯವಾಗಿ ಕನ್ನಡ ಬರೆಯಲು ಸಾಕಷ್ಟು ಸಮಯ ಹಿಡಿಯುತ್ತದೆ ಎನ್ನುವವರಿದ್ದಾರೆ ಆದರೆ ಇಂದಿನ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ನಿಗದಿಪಡಿಸಿದ್ದ ಸಮಯಕ್ಕಿಂತ ಮುಂಚಿತವಾಗಿಯೇ ಪರೀಕ್ಷೆ ಬರೆದು ಸಂಭ್ರಮಿಸಿದ್ದಾರೆ.

ವಿದ್ಯಾರ್ಥಿಗಳೇ ಹೇಳುವಂತೆ "ನಾವು ಕನ್ನಡ ಪರೀಕ್ಷೆಯನ್ನು ಸುಲಭವಾಗಿರುತ್ತದೆ ಎಂದು ಊಹಿಸಿದ್ದೆವು, ನಮ್ಮ ನಿರೀಕ್ಷೆಯಂತೆ ಸುಲಭ ಪ್ರಶ್ನೆಗಳನ್ನೇ ಕೇಳಲಾಗಿದೆ. ಪತ್ರಿಕೆಯ ಇ-ವಿಭಾಗದ ಸಂದರ್ಭ ಸಹಿತ ವಿವರಿಸಿ ಸ್ವಲ್ಪ ಕಷ್ಟ ಎನಿಸಿತು ಎನ್ನುವುದು ಬಿಟ್ಟರೆ ಉಳಿದ ವಿಭಾಗಗಳು ತುಂಬಾ ಸರಳವಾಗಿತ್ತು."

ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಹಿಲ್‌ಸೈಡ್‌ ಕಾಲೇಜಿನ ವಿದ್ಯಾರ್ಥಿ ಮನು ಮಾತನಾಡಿ "ನಾವು ಇಷ್ಟು ಸುಲಭವಾಗಿರುತ್ತದೆ ಎಂದು ಭಾವಿಸಿರಲಿಲ್ಲ. ನಾವು ಹೇಗೆ ಅಭ್ಯಾಸ ಮಾಡಿದ್ದೆವೊ ಅದರಂತೆಯೇ ಪ್ರಶ್ನೆಗಳನ್ನು ಕೇಳಲಾಗಿದೆ. ಹಿಂದಿನ ಪ್ರಶ್ನೆಪ್ರತ್ರಿಕೆಗಳನ್ನು ಸಾಕಷ್ಟು ಅಭ್ಯಾಸ ಮಾಡಿದ್ದೆವು ಹಾಗಾಗಿ ನಿರಾಯಾಸವಾಗಿ ಪರೀಕ್ಷೆ ಬರೆದೆವು, ಇನ್ನು ಇಂಗ್ಲಿಷ್ ಪರೀಕ್ಷೆ ಮಾತ್ರ ಉಳಿದಿದ್ದು ಅದನ್ನು ಬರೆದು ಮುಗಿಸುವ ಉತ್ಸಾಹದಲ್ಲಿದ್ದೇವೆ." ಎಂದರು.

ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ನೂರು ಅಂಕಗಳ ಕನ್ನಡ ಪ್ರಶ್ನೆಪತ್ರಿಕೆಯು ಒಟ್ಟು 55 ಪ್ರಶ್ನೆಗಳನ್ನು ಒಳಗೊಂಡಿದೆ. ಈ ಪತ್ರಿಕೆಯನ್ನು 5 ಭಾಗಗಳನ್ನಾಗಿ ವಿಂಗಡಿಸಿದ್ದು ಬರೆಯಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

ಅ-ವಿಭಾಗ
ಪ್ರಶ್ನೆಪತ್ರಿಕೆಯ ಮೊದಲ ಭಾಗವು 10 ಅಂಕಗಳನ್ನು ಹೊಂದಿದ್ದು ಹತ್ತು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಯಾವುದೇ ಹೆಚ್ಚುವರಿ ಪ್ರಶ್ನೆಗಳು ಇರುವುದಿಲ್ಲ. ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಬೇಕಾಗಿದ್ದು ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಆ ವಿಭಾಗ
20 ಅಂಕಗಳ ಎರಡನೇ ವಿಭಾಗವನ್ನು ಮೂರು ಉಪ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಎರಡು ಅಂಕದ ಐದು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಯು ಯಾವುದಾದರು ನಾಲ್ಕು ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸತಕ್ಕದ್ದು. ಎರಡು ಮತ್ತು ಮೂರನೇ ವಿಭಾಗದಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದ್ದು ಇಲ್ಲಿ ವಿದ್ಯಾರ್ಥಿಯು ಯಾವುದಾದರು ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗಿದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಇ-ವಿಭಾಗ
ಇ ಭಾಗ ಕೂಡ ಎರಡನೆ ವಿಭಾಗದಂತೆ ಮೂರು ಉಪ ವಿಭಾಗಗಳನ್ನು ಹೊಂದಿದೆ. ಒಟ್ಟು 12 ಅಂಕಗಳನ್ನು ಒಳಗೊಂಡಿದ್ದು ಇಲ್ಲಿ ವಿದ್ಯಾರ್ಥಿಯು ಕೇಳಿರುವ ಪ್ರಶ್ನೆಗಳಿಗೆ ಸಂದರ್ಭ ಸೂಚಿಸಿ ಸ್ವಾರಸ್ಯವನ್ನು ಬರೆಯಬೇಕಾಗುತ್ತದೆ.

ಈ-ವಿಭಾಗ
ಪತ್ರಿಕೆಯ ನಾಲ್ಕನೆ ಭಾಗವು ಮೂರು ವಿಭಾಗಳನ್ನು ಹೊಂದಿದ್ದು ನಾಲ್ಕು ಅಂಕದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಯು ಐದಾರು ವಾಕ್ಯದಲ್ಲಿ ಉತ್ತರಿಸಬೇಕಾಗಿದ್ದು ಈ ವಿಭಾಗದಲ್ಲಿ ಒಟ್ಟು 28 ಅಂಕಗಳಿರುತ್ತವೆ.

ಉ-ವಿಭಾಗ
30 ಅಂಕಗಳ ಪತ್ರಿಕೆಯ ಕೊನೆಯ ವಿಭಾಗದಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ಪದ್ಯದ ಭಾವಾರ್ಥ, ಸೂಚನೆಗನುಗುಣವಾಗಿ ಬರೆಯುವ ಪ್ರಶ್ನೆಗಳು, ಪ್ರಬಂಧ, ಪತ್ರ ಬರೆಯುವುದು ಮತ್ತು ಗಾದೆಯೊಂದನ್ನು ವಿಸ್ತರಿಸಿ ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

English summary
Today's Karnataka II PUC kannada exam paper was an icing to the exams cake as students found it easy to write.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia