ಸಿಇಟಿ 2017: ಎರಡನೇ ದಿನ ಮಂಕಾದ ವಿದ್ಯಾರ್ಥಿಗಳು

Posted By:

ಸಿಇಟಿ 2017 ಎರಡನೇ ದಿನವಾದ ಇಂದು ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರದ ಪರೀಕ್ಷೆಗಳು ನಡೆದಿವೆ. ಬೆಳಗ್ಗೆ 10:30 ಕ್ಕೆ ಆರಂಭವಾದ ಪರೀಕ್ಷೆಯಲ್ಲಿ ಭೌತಶಾಸ್ತ್ರ ಬರೆದರೆ, ಮಧ್ಯಾಹ್ನ 2:30 ಕ್ಕೆ ರಸಾಯನಶಾಸ್ತ್ರ ಬರೆದಿದ್ದಾರೆ. 

ಮೊದಲ ದಿನ ಸಂಭ್ರಮಿಸಿದ್ದ ವಿದ್ಯಾರ್ಥಿಗಳಿಗೆ ಇಂದಿನ ಪತ್ರಿಕೆಗಳು ಕೊಂಚ ಕಾಡಿರುವುದು ವಿದ್ಯಾರ್ಥಿಗಳ ಹೇಳಿಕೆಯಲ್ಲಿ ಕಂಡು ಬರುತ್ತಿತ್ತು. ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಮಿಶ್ರ ಪ್ರತಿಕ್ರಿಯೆ ನೀಡಿದರು. 

ಎನ್ ಎಂ ಕೆ ಆರ್ ವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿಜಯ್ ಮಾತನಾಡಿ "ನಿನ್ನೆ ಪ್ರಶ್ನೆಪತ್ರಿಕೆಗೆ ಹೋಲಿಸಿದರೆ ಇಂದು ಸ್ವಲ್ಪ ಕಷ್ಟವಿತ್ತು. ನಾವು ಚೆನ್ನಾಗಿಯೇ ತಯಾರಿ ಮಾಡಿದ್ದೆವು ಆದರೆ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುವ ಹಾಗಾಯಿತು. ಕೆಲವೊಂದು ಪ್ರಶ್ನೆಗಳು ನೇರವಾಗಿದ್ದರೆ ಮತ್ತೆ ಕೆಲವು ಅರ್ಥವಾಗುತ್ತಿರಲಿಲ್ಲ. ಆದರೂ ಉತ್ತಮವಾಗಿ ಉತ್ತರಿಸಿದ್ದೇವೆ ಎನ್ನುವ ಭರವಸೆ ಇದೆ" ಎಂದು ಹೇಳಿದರು.[ಸಿಇಟಿ ಮೊದಲ ದಿನ]

ಎರಡನೇ ದಿನ ಮಂಕಾದ ವಿದ್ಯಾರ್ಥಿಗಳು

ಇಂದಿನ ಪ್ರಶ್ನೆಪತ್ರಿಕೆಯಲ್ಲಿ ಶೇ.40 ರಷ್ಟು ಪ್ರಥಮ ಪಿಯುಸಿಯ ಪ್ರಶ್ನೆಗಳನ್ನೇ ಕೇಳಲಾಗಿತ್ತು. ಸಿಇಟಿಗಾಗಿಯೇ ಕೆಲವೊಂದು ಸ್ಟಡಿ ಮೆಟಿರಿಯಲ್ ಅಭ್ಯಾಸ ಮಾಡಿದ್ದರಿಂದ ಅಷ್ಟಾಗಿ ಕಷ್ಟವಾಗಲಿಲ್ಲ. ಉತ್ತಮ ಅಂಕದೊಂದಿಗೆ ಉತ್ತಮ ರ್ಯಾಂಕಿಂಗ್ ಗಳಿಸುವ ವಿಶ್ವಾಸವಿದೆ ಎಂದು ವಿದ್ಯಾರ್ಥಿನಿ ವಚನಶ್ರೀ ಹೇಳಿದರು.

ಇಂದು ಕೂಡ ವಿದ್ಯಾರ್ಥಿಗಳು ಕನ್ನಡ ಪ್ರಶ್ನೆಗಳ ಕಡೆ ಗಮನ ನೀಡದಿರುವುದು ಕಂಡು ಬಂತು. ಕಾಲೇಜು ಮತ್ತು ಟ್ಯೂಷನ್ ಗಳಲ್ಲಿ ಇಂಗ್ಲಿಷ್ನಲ್ಲೇ ಅಭ್ಯಾಸ ಮಾಡಿದ್ದರಿಂದ ಕನ್ನಡದ ಪ್ರಶ್ನೆಗಳ ಕಡೆ ನಮ್ಮ ಗಮನ ಹರಿಯಲೇ ಇಲ್ಲ. ಒಮ್ಮೊಮ್ಮೆ ಕಷ್ಟದ ಪ್ರಶ್ನೆಗಳನ್ನು ಕನ್ನಡದಲ್ಲಿ ಓದಲು ಪ್ರಯತ್ನಿಸಿದೆವು. ಆದರೆ ನಮಗೆ ಇಂಗ್ಲಿಷ್ ಪ್ರಶ್ನೆಗಳೇ ಸುಲಭವಾಗಿ ಅರ್ಥವಾಗುತ್ತಿದ್ದವು ಎಂದು ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯವಾಗಿತ್ತು.

ಪೋಷಕರ ಮಾತು

"ಇಂದಿಗೆ ಪರೀಕ್ಷೆಗಳೆಲ್ಲ ಮುಗಿಯಿತು. ಇನ್ನೇನಿದ್ದರು ರಿಸಲ್ಟ್ ಬರುವುದೊಂದೆ ಬಾಕಿ. ಎಲ್ಲಾ ಪರೀಕ್ಷೆಗಳನ್ನು ಚೆನ್ನಾಗಿ ಮಾಡಿದ್ದೇವೆ ಅಂತಾನೇ ಎಲ್ಲರು ಹೇಳುವುದು. ಅದರೆ ಮೇ 10 ಕ್ಕೆ ಪಿಯು ಫಲಿತಾಂಶ ಬರುವುದಾಗಿ ಮಾಹಿತಿ ಇದೆ. ಆಗ ಇವರ ಬಂಡವಾಳ ತಿಳಿಯುತ್ತದೆ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ, ಹಾಗೇ ತುಂಬಾ ನಿರೀಕ್ಷೆಗಳು ಕೂಡ ಇವೆ" ಎನ್ನುವುದು ಪೋಷಕರೊಬ್ಬರ ಮಾತು.

60 ಪ್ರಶ್ನೆಗಳ ಪತ್ರಿಕೆಗೆ 80 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು ಇದರಲ್ಲಿ ಉತ್ತರಿಸಲು 70 ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಆರಂಭದ ಹತ್ತು ನಿಮಿಷವನ್ನು ಒಎಂಆರ್ ಪತ್ರಿಕೆಯಲ್ಲಿ ವಿದ್ಯಾರ್ಥಿಗಳ ವಿವರನ್ನು ತುಂಬಲು ನೀಡಲಾಗಿದೆ.

English summary
Mixed response from the students on the second day of Karnataka CET examination

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia