ಸ್ವಚ್ಛ ಕ್ಯಾಂಪಸ್ ಪಟ್ಟಿಯಲ್ಲಿ ಖಾಸಗಿ ಸಂಸ್ಥೆಗಳೇ ಮುಂದು

Posted By:

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಚ್ಛತೆಯ ಸಮೀಕ್ಷೆಯ ವರದಿಯನ್ನಾಧರಿಸಿ ಕಾಲೇಜುಗಳು ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸ್ಚಚ್ಛತೆಯ ವಿಚಾರದಲ್ಲಿ ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಒಡೆತನದ ಸಂಸ್ಥೆಗಳೇ ಮುಂದಿವೆ.

ಮಾನವ ಸಂಪನ್ಮೂಲ ಸಚಿವಾಲಯವು ನಾಲ್ಕು ವರ್ಗಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು. ವಿಶ್ವವಿದ್ಯಾಲಯ, ಕಾಲೇಜು, ತಾಂತ್ರಿಕ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಎಂಬ ವರ್ಗೀಕರಣ ಮಾಡಲಾಗಿತ್ತು. ಒಟ್ಟು 3,500 ವಿದ್ಯಾಸಂಸ್ಥೆಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದವು.

ಯುಜಿಸಿ ಮತ್ತು ಎಐಸಿಟಿಇ ತಜ್ಞರ ಸಮಿತಿ 174 ಅಗ್ರ ಸಂಸ್ಥೆಗಳನ್ನು ಅಂತಿಮಗೊಳಿಸಿತ್ತು. ಇದರಲ್ಲಿ ವಿಶ್ವವಿದ್ಯಾಲಯ, ತಾಂತ್ರಿಕ ಸಂಸ್ಥೆ, ಕಾಲೇಜು ಮತ್ತು ಸರ್ಕಾರಿ ಸಂಸ್ಥೆಗಳ ವಿಭಾಗಗಳಲ್ಲಿ ಒಟ್ಟಾರೆ 25 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸ್ಮಾರ್ಟ್ ಕ್ಯಾಂಪಸ್

ಮೊದಲ ಸಮೀಕ್ಷೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಸರ್ಕಾರಿ ವಿದ್ಯಾಸಂಸ್ಥೆಗಳನ್ನು ಹಿಂದಿಕ್ಕಿವೆ. ಸೋನಿಪತ್‌ನಲ್ಲಿರುವ ಒ.ಪಿ. ಜಿಂದಾಲ್‌ ಗ್ಲೋಬಲ್‌ ಯುನಿವರ್ಸಿಟಿ ಅತ್ಯಂತ ಸ್ವಚ್ಛ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಮಣಿಪಾಲ ವಿಶ್ವವಿದ್ಯಾಲಯದ ಗುಜರಾತ್‌ ಕ್ಯಾಂಪಸ್‌ಗೆ ಎರಡನೇ ಸ್ಥಾನ ದೊರಕಿದೆ.

ಬೆಳಗಾವಿಯ ಕೆ.ಎಲ್‌.ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಎಂಡ್‌ ರಿಸರ್ಚ್‌ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಸ್ವಚ್ಛತೆಯ ರ‍್ಯಾಂಕಿಂಗ್‌ನಲ್ಲಿ ತಮಿಳುನಾಡಿನ ವಿದ್ಯಾಸಂಸ್ಥೆಗಳೇ ಮುಂದಿವೆ. ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ವರ್ಗಗಳ ಮೊದಲ ಐದು ಸ್ಥಾನಗಳಲ್ಲಿ ತಮಿಳುನಾಡಿನ ಒಟ್ಟು 11 ಸಂಸ್ಥೆಗಳು ಸ್ಥಾನ ಪಡೆದಿವೆ.

ವಿದ್ಯಾರ್ಥಿಗಳ ಸಂಖ್ಯೆ, ಶೌಚಗೃಹದ ಸರಾಸರಿ, ಅಡುಗೆ ಕೋಣದ ಸ್ವಚ್ಛತೆ, ಹರಿಯುವ ನೀರಿನ ಲಭ್ಯತೆ, ಶೌಚಗೃಹ ಮತ್ತು ಅಡುಗೆ ಕೋಣೆಯಲ್ಲಿ ಆಧುನಿಕ ವಸ್ತುಗಳು, ಕ್ಯಾಂಪಸ್​ನಲ್ಲಿನ ಹಸಿರಿನ ಪ್ರಮಾಣ, ವಸತಿಗೃಹ ಮತ್ತು ಶೈಕ್ಷಣಿಕ ಕಟ್ಟಡಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಅನುಸರಿಸಲಾಗುತ್ತಿರುವ ತಂತ್ರ, ನೀರು ಪೂರೈಕೆ ವ್ಯವಸ್ಥೆ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ತೊಡಗಿಸಿಕೊಂಡಿರುವುದನ್ನು ಆಧರಿಸಿ ರ‍್ಯಾಂಕಿಂಗ್ ನೀಡಲಾಗಿದೆ.

ಆಯ್ಕೆಯಾದ ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಿದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನದಡಿ 2014ರಿಂದ ಇಲ್ಲಿಯವರೆಗೆ 4.80 ಲಕ್ಷ ಶೌಚ ಗೃಹ ನಿರ್ವಿುಸಲಾಗಿದೆ. 2 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ ಎಂದರು.

ವಿಶ್ವವಿದ್ಯಾಲಯ ಮತ್ತು ವಿದ್ಯಾಸಂಸ್ಥೆಗಳಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಸುಸ್ಥಿರವಾದ ರೀತಿಯಲ್ಲಿ ವಿಲೇವಾರಿ ಮಾಡಲು ದಾರಿಗಳನ್ನು ಕಂಡುಕೊಳ್ಳಬೇಕು. ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೂ ಸ್ವಚ್ಛತೆ ಕಾಪಾಡಲು ನೆರವಾಗಬೇಕು ಎಂದು ಜಾವಡೇಕರ್‌ ಹೇಳಿದರು.

'ಇಂಧನ ಉಳಿಸಿ, ವಿದ್ಯುತ್‌ ಉಳಿಸಿ, ತ್ಯಾಜ್ಯವನ್ನು ಸುಸ್ಥಿರವಾಗಿ ವಿಲೇವಾರಿ ಮಾಡಿ ಮತ್ತು ಜಾಣ ವಿದ್ಯಾಸಂಸ್ಥೆ ಎನಿಸಿಕೊಳ್ಳಿ' ಎಂದು ಅವರು ಕರೆ ನೀಡಿದರು. ಮುಂದಿನ ವರ್ಷದ (2018) ಸ್ವಚ್ಛ ರ‍್ಯಾಂಕಿಂಗ್‌ಗೆ ಈ ಮೂರು ಅಂಶಗಳೇ ಮುಖ್ಯ ಚೌಕಟ್ಟಾಗಿರುತ್ತವೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ಸ್ವಚ್ಛತೆಯ ರಾಯಭಾರಿ ಗಳಾಗಿದ್ದು, ಜನರು ಹಾಗೂ ಸಂಸ್ಥೆಗಳ ಸಹಕಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಮಿಷನ್ ಮುಂದುವರಿಸಲಾಗುವುದು. ಎಚ್​ಇಐಗಳನ್ನು ಸ್ಮಾರ್ಟ್ ಕ್ಯಾಂಪಸ್ ಆಗಿ ರೂಪಿಸುವುದರ ಜತೆಗೆ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ನೀರು ಮತ್ತು ವಿದ್ಯುತ್ ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

English summary
O.P. Jindal Global University (JGU) has been awarded the first rank amongst 3,500 institutions in the Swachhta Rankings of all Higher Educational Institutions in India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia