ಪರೀಕ್ಷೆಗೆ ಹೋಗುವ ಮುನ್ನ ಒಮ್ಮೆ ಇದನ್ನು ಗಮನಿಸಿ

Posted By:

ದ್ವಿತೀಯ ಪಿಯುಸಿ ಪರೀಕ್ಷೆಗಳು ದಿನಾಂಕ 09 -03 -2017 ರಿಂದ ಪ್ರಾರಂಭವಾಗಲಿವೆ. ಈ ಬಾರಿ 6,84,247 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ ಹೊಸಬರು, ಪುನರಾವರ್ತಿಗಳು ಮತ್ತು ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.

ಪರೀಕ್ಷೆ ಎಂದಮೇಲೆ ಕುತೂಹಲ, ಆತಂಕ ಸಾಮಾನ್ಯ. ಕೆಲವರು ಪರೀಕ್ಷೆಗೆ ಸವಾಲೊಡ್ಡಿದರೆ ಕೆಲವರಿಗೆ ಪರೀಕ್ಷೆಗಳೇ ಸವಾಲೊಡ್ಡುತ್ತವೆ. ಅದೇನೇ ಇರಲಿ ಪರೀಕ್ಷಾ ಕೊಠಡಿ ತಲುಪುವ ಮುನ್ನ ವಿದ್ಯಾರ್ಥಿಗಳಿಗಾಗಿ ಇಲ್ಲೊಂದಿಷ್ಟು ಸಲಹೆಗಳಿವೆ.

ಬೇಗ ಏಳಿ

ಪರೀಕ್ಷೆ ಹಿಂದಿನ ದಿನ ಹೆಚ್ಚು ನಿದ್ದೆಗೆಡಬೇಡಿ, ಸಾಧ್ಯವಾದಷ್ಟು ಬೇಗ ಮಲಗಿ ಬೇಗ ಏಳಿ. ನೀವು ಎಷ್ಟು ಸುಖಕರ ನಿದ್ದೆ ಮಾಡುತ್ತಿರೋ ಅಷ್ಟು ಉಲ್ಲಾಸದಿಂದಿರುತ್ತೀರಿ. ಪರೀಕ್ಷೆ ದಿನ ಸಾಧ್ಯವಾದಷ್ಟು ಬೇಗ ಎದ್ದು ಫ್ರೆಶ್ ಆಗಿ. ನಿಮ್ಮ ಮನಸಿಗೆ ಇಷ್ಟವಾಗುವ ದೇವರನ್ನು ನೆನೆದು ದಿನವನ್ನು ಆರಂಭಿಸಿ.

ಊಟ ತಿಂಡಿ ನಿಯಮಿತವಾಗಿರಲಿ

ಹಿಂದಿನ ದಿನ ನಿಯಮಿತ ಊಟ ಸೇವಿಸಿ. ಹಾಗು ಪರೀಕ್ಷೆಗೆ ಹೋಗುವ ಮುನ್ನ ನಿಯಮಿತ ತಿಂಡಿ ಸೇವಿಸಿ. ಹೊಟ್ಟೆ ಖಾಲಿ ಇದ್ದಾರೆ ಆಯಾಸವಾಗುತ್ತದೆ, ಹಾಗಂತ ಹೆಚ್ಚು ತಿನ್ನಬೇಡಿ. ಮನೆಯಲ್ಲಿದ್ದವರು ಮನೆಯಲ್ಲಿ ಅಥವಾ ಹಾಸ್ಟೆಲ್ಗಳಲ್ಲಿರುವವರು ಹಾಸ್ಟೆಲ್ಗಳ್ಳಲ್ಲಿ ಮಾತ್ರ ಆಹಾರ ಸೇವಿಸಿ, ಹೊರಗಿನ ಆಹಾರ ಸಾಧ್ಯವಾದಷ್ಟು ತಪ್ಪಿಸಿ. ಏಕೆಂದರೆ ಹೊರಗಿನ ಉಪಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ ಹೊರಗಿನ ಆಹಾರ ಸೇವಿಸುವುದಾದರೆ ಕುಡಿಯಲು ಬಿಸಿ ನೀರನ್ನು ಉಪಯೋಗಿಸಿ. ನಿಮ್ಮ ಪರೀಕ್ಷೆ ಮುಗಿಯುವವರೆಗೂ ನಿಮ್ಮ ಆರೋಗ್ಯದ ಕಡೆಗೂ ಹೆಚ್ಚು ಗಮನವಿರಲಿ.

ವಿದ್ಯಾರ್ಥಿಗಳಿಗೆ ಕಿವಿಮಾತು

ಪರೀಕ್ಷಾ ಸಾಮಗ್ರಿಗಳನ್ನು ಜೋಡಿಸಿಕೊಳ್ಳಿ

ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಸಾಮಗ್ರಿಗಳನ್ನು ಹಿಂದಿನ ದಿನವೇ ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳಿ. ಪ್ರವೇಶ ಪತ್ರ , ಕಾಲೇಜು ಐಡಿ, ಪೆನ್ನುಗಳು, ಇತ್ಯಾದಿಗಳ ಬಗ್ಗೆ ಗಮನವಿರಲಿ. ಪರೀಕ್ಷಾ ಕೇಂದ್ರಕ್ಕೆ ಹೊರಡುವ ಮುನ್ನ ಮತ್ತೊಮ್ಮೆ ಎಲ್ಲವನ್ನು ಪರಿಶೀಲಿಸಿಕೊಳ್ಳಿ.

ಮುಂಚಿತವಾಗಿ ತಲುಪಿ

ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರೀಕ್ಷಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಪರೀಕ್ಷೆಗಳು ಬೆಳಗ್ಗೆ 10 :15 ಕ್ಕೆ ಆರಂಭವಾಗಲಿದ್ದು ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರ ತಲುಪುವುದು ಉತ್ತಮ. ಪರೀಕ್ಷೆ ಆರಂಭಕ್ಕೂ 20 ನಿಮಿಷ ಮುಂಚಿತವಾಗಿ ತಲುಪಿದರೆ ಗಲಿಬಿಲಿಯಾಗದೆ ಆರಾಮಾಗಿ ಪರೀಕ್ಷೆ ಬರೆಯಬಹುದು. ಪರೀಕ್ಷೆಯ ಹಿಂದಿನ ದಿನವೇ ನೀವು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಸರಿಯಾದ ಸಮಯಕ್ಕೆ ನೀವು ಪರೀಕ್ಷಾ ಕೇಂದ್ರ ತಲುಪಬಹುದು.

ಅತಿಯಾದ ಆತ್ಮವಿಶ್ವಾಸ ಬೇಡ

ಎಲ್ಲವು ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ಅದೇ ರೀತಿ ಉದಾಸೀನತೆಯು ಒಳ್ಳೆಯದಲ್ಲ. ಸರಿಯಾದ ಕ್ರಮದಲ್ಲಿ ಓದಿರುವೆ ಎಂಬ ವಿಶ್ವಾಸವಿದ್ದರೆ ಅದೇ ನಿಮಗೆ ದಾರಿದೀಪ.

ಪರೀಕ್ಷೆಗೂ ಮುನ್ನ ಹೆಚ್ಚು ಮಾತನಾಡಬೇಡಿ

ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೂ ಮುನ್ನ ಹೆಚ್ಚು ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅನಗತ್ಯವಾಗಿ ಮಾತನಾಡುತ್ತ ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಓದಿರುವುದನ್ನು ಬಿಟ್ಟು ಓದದೇ ಇರುವುದರ ಬಗ್ಗೆ ಹೆಚ್ಚು ಮಾತಾಡಿ ಆತಂಕ ಸೃಷ್ಟಿಸುತ್ತಾರೆ. ಹಾಗಾಗಿ ಅನಗತ್ಯವಾಗಿ ಯಾರೊಂದಿಗೂ ಮಾತನಾಡಬೇಡಿ.

ಪರೀಕ್ಷಾ ಕೊಠಡಿ ಒಳಗೆ

ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ನಿಮ್ಮ ನೋಂದಣಿ ಸಂಖ್ಯೆ ಪರಿಶೀಲಿಸಿ ನಿಮ್ಮ ಸ್ಥಾನಗಳಲ್ಲಿ ಆರಾಮಾಗಿ ಕುಳಿತುಕೊಳ್ಳಿ. ಒಂದು ನಿಮಿಷ ದೀರ್ಘವಾಗಿ ಉಸಿರಾಡಿ. ದೀರ್ಘವಾಗಿ ಉಸಿರಾಡುವುದರ ಮೂಲಕ ನೀವು ಏಕಾಗ್ರತೆ ಕಾಯ್ದುಕೊಳ್ಳಬಹುದು. ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

ಉತ್ತರ ಪತ್ರಿಕೆ ಎಚ್ಚರದಿಂದ ತುಂಬಿ

ಉತ್ತರ ಪತ್ರಿಕೆಗಳನ್ನು ತಪ್ಪಿಲ್ಲದಂತೆ ಎಚ್ಚರವಾಗಿ ತುಂಬಿ. ನೋಂದಣಿ ಸಂಖ್ಯೆಯನ್ನು ತಪ್ಪಿಲ್ಲದಂತೆ ನಮೂದಿಸಿ. ಕೊಠಡಿ ಮೇಲ್ವಿಚಾರಕ ಸಹಿ ಪಡೆಯಿರಿ. ಉತ್ತರ ಪತ್ರಿಕೆಯ ಮೇಲೆ ಮುದ್ರಣವಾಗಿರುವ ಸೂಚನೆಗಳನ್ನು ತಪ್ಪದೆ ಓದಿ.

ಪ್ರಶ್ನೆ ಪತ್ರಿಕೆ ಓದಿ

ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಪೂರ್ಣವಾಗಿ ಓದಿ. ಪ್ರಶ್ನೆ ಪತ್ರಿಕೆ ಮೇಲೆ ಅನವಶ್ಯಕವಾಗಿ ಏನನ್ನು ಬರೆಯಬೇಡಿ. ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ ಉತ್ತರಿಸಿ. ಸಾಧ್ಯವಾದಷ್ಟು ಒಂದೇ ಪೆನ್ನನ್ನು ಬಳಸಿ.

ಪರೀಕ್ಷೆ ಮುಗಿದ ಬಳಿಕ

ಪರೀಕ್ಷೆ ಮುಗಿದ ಬಳಿಕ ಗೆಳೆಯರೊಂದಿಗೆ ಹೆಚ್ಚು ಮಾತನಾಡುತ್ತ ಸಮಯ ವ್ಯರ್ಥ ಮಾಡಬೇಡಿ. ಮುಗಿದ ಪರೀಕ್ಷೆಯ ಬಗ್ಗೆ ಚರ್ಚೆ ಮಾಡುತ್ತಾ ಸಮಯ ಕಳೆಯಬೇಡಿ. ಸಾಧ್ಯವಾದಷ್ಟು ಬೇಗ ಮನೆ ಸೇರಿ ಮುಂದಿನ ಪರೀಕ್ಷೆಗೆ ಸಿದ್ದರಾಗಿ.

ಇದನ್ನು ಗಮನಿಸಿ:

English summary
Tips for Exams for 2nd PU students Karnataka

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia